ನವದೆಹಲಿ(ಸೆ. 05): ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿದ್ದ ಬಾಬ್ರಿ ಮಸೀದಿಯ ಗಾತ್ರದಷ್ಟೇ ಅಯೋಧ್ಯೆಯ ಧಮ್ಮಿಪುರ್ ಗ್ರಾಮದಲ್ಲಿ ಮಸೀದಿ ನಿರ್ಮಾಣವಾಗಲಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಬೇರೆ ಮಸೀದಿ ನಿರ್ಮಾಣಕ್ಕೆ ಧಮ್ಮಿಪುರ್ನಲ್ಲಿ 5 ಎಕರೆ ಜಾಗವನ್ನು ನೀಡಲಾಗಿದೆ. ಈ ಐದು ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಲೈಬ್ರರಿ, ಮ್ಯೂಸಿಯಂ ಮತ್ತಿತರ ಸೌಲಭ್ಯಗಳನ್ನೂ ನಿರ್ಮಾಣ ಮಾಡಲಾಗುತ್ತದೆ. ಮಸೀದಿ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್ನ ಪದಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಮಸೀದಿ ಕಾಂಪ್ಲೆಕ್ಸ್ನಲ್ಲಿ ನಿರ್ಮಾಣವಾಗಲಿರುವ ಮ್ಯೂಸಿಯಂನ ಪ್ರಮುಖ ಕ್ಯೂರೇಟರ್ ಆಗಿ ಖ್ಯಾತ ಆಹಾರ ವಿಮರ್ಶಕ ಪುಷ್ಪೇಶ್ ಪಂತ್ ಇರಲಿದ್ದಾರೆ.
“…ಧಮ್ಮಿಪುರ್ನಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಸಮುಚ್ಚಯದಲ್ಲಿ ಆಸ್ಪತ್ರೆ, ಮ್ಯೂಸಿಯಂನಂಥ ಸೌಲಭ್ಯಗಳಿರುತ್ತವೆ. ಐದು ಎಕರೆಯ ಈ ಪ್ರದೇಶದಲ್ಲಿ 15 ಸಾವಿರ ಚದರಡಿಯಲ್ಲಿ ಮಸೀದಿ ಇರಲಿದ್ದು, ಇನ್ನುಳಿದ ಜಾಗದಲ್ಲಿ ಬೇರೆ ಬೇರೆ ಸೌಕರ್ಯಗಳನ್ನ ನಿರ್ಮಾಣ ಮಾಡಲಾಗುತ್ತದೆ” ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಮತ್ತು ವಕ್ತಾರ ಅಥರ್ ಹುಸೇನ್ ಹೇಳಿದ್ದಾರೆ.
ಮೊಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ ಕಟ್ಟಿದ ಬಾಬರಿ ಮಸೀದಿಯ ಜಾಗವು ಶ್ರೀರಾಮನ ಜನ್ಮ ಸ್ಥಳವೆಂಬುದು ಹಿಂದೂಗಳ ವಾದ. ಅದೇ ಆಂದೋಲನದಲ್ಲಿ 1991ರಲ್ಲಿ ಕರಸೇವಕರು ಮಸೀದಿಯನ್ನು ಹೊಡೆದುಹಾಕಿದ್ದರು. ಇಲ್ಲಿ ನಡೆದ ಉತ್ಖನನದಲ್ಲಿ ಮಸೀದಿಗೆ ಮುಂಚೆ ಬೇರೊಂದು ಕಟ್ಟಡ ಅಸ್ತಿತ್ವದಲ್ಲಿತ್ತೆಂಬುದಕ್ಕೆ ಪುರಾವೆಗಳು ಸಿಕ್ಕಿದ್ದವು. ಇವೆಲ್ಲಾ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿ ಬಾಬರಿ ಮಸೀದಿ ಇದ್ದ ಸ್ಥಳವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ವಹಿಸಿಕೊಟ್ಟಿತು. ಇಲ್ಲಿ ರಾಮಮಂದಿರ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಹೇಳಿತು. ಮುಸ್ಲಿಮರಿಗೆ ಅಯೋಧ್ಯೆಯಲ್ಲೇ ಬೇರೊಂದು ಜಾಗದಲ್ಲಿ 5 ಎಕರೆ ಜಮೀನು ನೀಡಬೇಕೆಂದೂ ಆದೇಶಿಸಿತು. ಅದರಂತೆ ಉತ್ತರ ಪ್ರದೇಶ ಸರ್ಕಾರ ಧಮ್ಮಿಪುರ್ನಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಪ್ರದೇಶವನ್ನು ಕೊಟ್ಟಿದೆ.
ರಾಮಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಈಗಾಗಲೇ ಅಡಿಗಲ್ಲು ಹಾಕಲಾಗಿದೆ. ನಿರ್ಮಾಣ ಕಾರ್ಯ ಕೂಡ ನಡೆದಿದೆ.
Comments are closed.