ರಾಷ್ಟ್ರೀಯ

ಉಗ್ರಪಟ್ಟಿಗೆ ಇಬ್ಬರು ಭಾರತೀಯರನ್ನು ಸೇರಿಸುವ ಪಾಕಿಸ್ತಾನದ ಯತ್ನಕ್ಕೆ 5 ದೇಶಗಳಿಂದ ತಡೆ

Pinterest LinkedIn Tumblr


ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಸಮಿತಿಯ 1267 ಸ್ಯಾಕ್ಷನ್ಸ್ ಕಮಿಟಿಯ ಪಟ್ಟಿಗೆ ಇಬ್ಬರು ಭಾರತೀಯರನ್ನು ಜಾಗತಿಕ ಉಗ್ರರೆಂದು ಘೋಷಿಸುವುದಕ್ಕಾಗಿ ಪಾಕಿಸ್ತಾನ ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ, ಪಾಕಿಸ್ತಾನದ ಈ ದುಸ್ಸಾಹಸವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಐದು ಸದಸ್ಯರಾಷ್ಟ್ರಗಳು ತಡೆದಿವೆ.

ಭಾರತೀಯರು ಉಗ್ರರು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ಪೂರೈಸದ ಪಾಕಿಸ್ತಾನ, ಅವರ ಹೆಸರನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಿತ್ತು. ಆದರೆ ಸಾಕ್ಷ್ಯಗಳನ್ನು ಪಾಕಿಸ್ತಾನ ಒದಗಿಸದ ಕಾರಣ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂಗಳು ಅದರ ಪ್ರಸ್ತಾವನೆಯನ್ನು ವಿರೋಧಿಸಿದವು. ಈ ಪೈಕಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಕಾಯಂ ಸದಸ್ಯ ರಾಷ್ಟ್ರಗಳಾದರೆ, ಜರ್ಮನಿ ಮತ್ತು ಬೆಲ್ಜಿಯಂ ಗಳು ಕಾಯಮೇತರ ಸದಸ್ಯ ರಾಷ್ಟ್ರಗಳು.

ಪಾಕ್ ಪ್ರಸ್ತಾವನೆಯಲ್ಲಿ ಭಾರತೀಯರಿಬ್ಬರನ್ನು ಗೋವಿಂದ ಪಟ್ನಾಯಕ್ ದುಗ್ಗಿವಲಸ ಮತ್ತು ಅಪ್ಪಾಜಿ ಅಂಗರ ಎಂದು ಗುರುತಿಸಲಾಗಿದೆ. ಈ ಪೈಕಿ ದುಗ್ಗಿವಲಸ ಆಫ್ಘನ್​ನಲ್ಲಿ ಕೆಪಾಸಿಟಿ ಬಿಲ್ಡಿಂಗ್ ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ಆತನ ವಿರುದ್ಧ 2018 ರ ಜುಲೈ 13ರಂದು ಬಲೂಚಿಸ್ತಾನದ ಮಸ್ತುಂಗ್​ನಲ್ಲಿ ಪಾಕ್​ ರಾಜಕಾರಣಿ ಸಿರಾಜ್ ರೈಸಾನಿ ಮೇಲಿನ ಉಗ್ರ ದಾಳಿಯ ಆರೋಪ ಹೊರಿಸಲಾಗಿದೆ. ಈ ದಾಳಿಯಲ್ಲಿ 160 ಜನ ಸಾವನ್ನಪ್ಪಿದ್ದರು.

ಇನ್ನು ಅಪ್ಪಾಜಿ ಅಂಗರ ಕಾಬೂಲ್​ನ ಬ್ಯಾಂಕ್ ಒಂದರಲ್ಲಿ ಸಾಫ್ಟ್​ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ ಪಾಕಿಸ್ತಾನದ ಲಾಹೋರ್​ನ ಮಾಲ್​ ರೋಡ್​ನಲ್ಲಿ 2017ರ ಫೆ.13ರಂದು ನಡೆದ ಉಗ್ರ ದಾಳಿಯ ಆರೋಪ ಹೊರಿಸಲಾಗಿದೆ. ಆತನಿಗೆ ಜಮಾತ್ ಉಲ್ ಅಹ್ರಾರ್​ ಜತೆ ನಂಟಿದೆ ಎಂದೂ ಆರೋಪಿಸಲಾಗಿದೆ. ಈ ಸಂಘಟನೆ ಪಾಕಿಸ್ತಾನದ ತೆಹ್ರೀಕ್ ಏ ತಾಲೀಬಾನ್ ಸಂಘಟನೆಯಿಂದ ಬಂಡಾಯವೆದ್ದು ಹೋದ ಬಣದ್ದು. 2014ರ ಡಿಸೆಂಬರ್ 16ರಂಧು ಪೇಶಾವರದ ಆರ್ಮಿ ಸ್ಕೂಲ್ ಮೇಲೆ ನಡೆದ ದಾಳಿಯ ಆರೋಪವನ್ನೂ ಅಂಗರ ವಿರುದ್ಧ ಹೊರಿಸಲಾಗಿದೆ. ಆದರೆ ಎರಡೂ ಆರೋಪಗಳಿಗೆ ಸೂಕ್ತ ನಂಬಲರ್ಹ ಸಾಕ್ಷ್ಯಾಧಾರಗಳನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿದೆ.

Comments are closed.