
ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರು ಇಲ್ಲದಿದ್ದರೂ ಸ್ವರ್ಗ ಕಳಚಿ ಬೀಳುವುದಿಲ್ಲ. ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕು ಎಂಬ ಅವಸರ ಈಗಿಲ್ಲ ಎಂದು ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಗಾಂಧಿ ಕುಟುಂಬಕ್ಕೆ ನಿಕಟವಾಗಿರುವ ಸಲ್ಮಾನ್ ಖುರ್ಷಿದ್, ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ಚುನಾವಣೆ ನಡೆದಿದರಲಿಲ್ಲ. ಅದಾಗ್ಯೂ ಪಕ್ಷ ಅಧಿಕಾರದಲ್ಲಿತ್ತು. ಗುಲಾಂ ನಬಿ ಅಜಾದ್ ಕೂಡ ಅಧಿಕಾರವನ್ನು ಅನುಭವಿಸಿದ್ದರು. ಇವರೆಲ್ಲಾ ಸೋನಿಯಾ ಗಾಂಧಿಗೆ ಪತ್ರ ಬರೆಯುವ ಬದಲು ಭೇಟಿಯಾಗಿ ಮನವಿ ಸಲ್ಲಿಸಬಹುದಿತ್ತು ಎಂದರು.
ಸೋನಿಯಾ ಗಾಂಧಿ ಪಕ್ಷವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ನಾಯಕತ್ವದ ವಿಚಾರದ ಬಗ್ಗೆ ಕೂಡ ಅವರೇ ತೀರ್ಮಾನ ಮಾಡುತ್ತಾರೆ. ಇವರು ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮೇಲೆ ನಾವು ನಂಬಿಕೆ ಮಾತ್ರ ಇಡಬೇಕಾಗಿದೆ. ಸೋನಿಯಾ ಗಾಂಧಿ ಅವರು ಸೂಕ್ತ ಸಂದರ್ಭದಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದರು.
ಪಕ್ಷದ ನಾಯಕತ್ವ ಸೇರಿದಂತೆ ಅನೇಕ ವಿಚಾರಗಳ ಬದಲಾವಣೆಗಾಗಿ ಆಗ್ರಹಿಸಿ 23 ಹಿರಿಯ ಮುಖಂಡರು ಪತ್ರ ಬರೆದಿದ್ದರು. ಒಂದು ವೇಳೆ ನನ್ನನ್ನೂ ಭೇಟಿ ಮಾಡಿದ್ದರೇ ಆ ಪತ್ರಕ್ಕೆ ಸಹಿ ಮಾಡುತ್ತಿರಲಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.
Comments are closed.