
ಬೆಂಗಳೂರು (ಆ. 30): ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಡ್ರಗ್ಸ್ಗೆ ಅಡಿಕ್ಟ್ ಆಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು. ದು ತೀವ್ರ ಚರ್ಚೆಗೆ ಕಾರಣವಾಗಿದೆ. ಡ್ರಗ್ಸ್ ಮಾಫಿಯಾ ಆರೋಪದಲ್ಲಿ ಬಂಧಿತಾಗಿರುವವರನ್ನು ಈ ಕುರಿತು ತೀವ್ರ ವಿಚಾರಣೆಗೆ ಒಳಪಡಿಸಿರುವ ಎನ್ಸಿಬಿ ಅಧಿಕಾರಿಗಳು 20ಕ್ಕೂ ಹೆಚ್ಚು ನಟ-ನಟಿಯರ ಪಟ್ಟಿ ತಯಾರಿಸಿದ್ದಾರೆ.
ಬೆಂಗಳೂರಿನ ಡ್ರಗ್ ಪೆಡ್ಲರ್ ಅನಿಕಾಳಿಂದ ಎನ್ಸಿಬಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಅನಿಕಾಳ ಹೇಳಿಕೆ ಆಧರಿಸಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಸುಮಾರು 20 ನಟ-ನಟಿಯರ ಪಟ್ಟಿಯನ್ನು ಎನ್ಸಿಬಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಮೂವರು ಪ್ರಸಿದ್ಧ ನಟಿಯರು, ಇಬ್ಬರು ನಟರು, ಮೂವರು ಧಾರಾವಾಹಿ ಕಲಾವಿದರು, ನಾಲ್ವರು ಗಣ್ಯ ವ್ಯಕ್ತಿಗಳ ಮಕ್ಕಳು ಹಾಗೂ ಸಂಗೀತ ನಿರ್ದೇಶಕರರೊಬ್ಬರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಇವರು ಆರೋಪಿಗಳ ಜೊತೆ ಒಡನಾಟದಲ್ಲಿ ಇದ್ದು, ಡ್ರಗ್ಸ್ ಖರೀದಿ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಕೆಲವೇ ದಿನಗಳಲ್ಲಿ ಎನ್ಸಿಬಿ ಅಧಿಕಾರಿಗಳು ಆ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ನೋಟೀಸ್ ನೀಡಲಿದ್ದಾರೆ. ನೋಟೀಸ್ ನೀಡಿ ಪ್ರತಿಯೊಬ್ಬರ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ. ಅನಿಕಾ ಜೊತೆಗೆ ಅನೂಪ್ ಹಾಗೂ ರಾಜೇಶ್ ರವೀಂದ್ರನ್ ವಿಚಾರಣೆಯನ್ನೂ ಮಾಡಲಾಗುತ್ತಿದೆ. ಮುಖ್ಯವಾಗಿ ಜರ್ಮನಿಯಿಂದ ಯಾರು ಡ್ರಗ್ಸ್ ಕಳುಹಿಸುತ್ತಿದ್ದರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಆದರೆ, ಆರೋಪಿ ಅನಿಕಾ ನನಗೇನೂ ಗೊತ್ತಿಲ್ಲ, ನನ್ನ ಗಂಡ ರೆಹಮಾನ್ ರೆಹಮಾನ್ ತಂದು ಕೊಟ್ಟದ್ದನ್ನು ನಾವು ಮಾರಾಟ ಮಾಡ್ತಾ ಇದ್ದೆವು. ಎಂದು ಹೇಳಿದ್ದಾಳೆ. ಸದ್ಯ ರೆಹಮಾನ್ ಮುಂಬೈ ಎನ್ಸಿಬಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಅನಿಕಾ, ರಾಜೇಶ್ ರವೀಂದ್ರನ್, ಹಾಗೂ ಅನೂಪ್ ಹೇಳಿಕೆ ಬಳಿಕ ಮತ್ತೆ ರೆಹಮಾನ್ ವಿಚಾರಣೆ ನಡೆಸಲಾಗುವುದು. ಬೆಂಗಳೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಮರದ, ರಟ್ಟಿನ ಬಾಕ್ಸ್ಗಳಲ್ಲಿ ಮಕ್ಕಳ ಆಟಿಕೆ ವಸ್ತುಗಳಲ್ಲಿ ಡ್ರಗ್ಸ್ ಪಾರ್ಸೆಲ್ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ತಿಳಿದುಬಂದಿತ್ತು.
ಜರ್ಮನಿ, ಬೆಲ್ಜಿಯಂ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್ ಪಾರ್ಸಲ್ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು. ಡಾರ್ಕ್ ವೆಬ್ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು. ದೊಡ್ಡ ಗುಬ್ಬಿಯ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಅನಿಕಾ ಎಂಬಾಕೆ ಕೆ. ರೆಹಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ಬುಕ್ಕಿಂಗ್ ಮಾಡುತ್ತಿದ್ದಳು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ರೆಹಮಾನ್ ಪಡೆದುಕೊಂಡು, ಅದನ್ನು ಅನಿಕಾ, ಅನೂಪ್ ಹಾಗೂ ರಾಜೇಶ್ಗೆ ನೀಡುತ್ತಿದ್ದ.
ಇದರ ಬೆನ್ನಿಗೆ ಸ್ಪೋಟಕ ಮಾಹಿತಿ ಹೊರಹಾಕಿದ್ದ ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ತನ್ನ ಕಬಂಧಬಾಹುಗಳನ್ನು ಚಾಚಿರುವುದು ನಿಜ. ಈ ಡ್ರಗ್‌ಗೆ ಅನೇಕ ನಟ-ನಟಿಯರು ಅಡಿಕ್ಟ್ ಆಗುತ್ತಿದ್ದಾರೆ. ಕೊಕೇನ್ ವರೆಗೂ ನಮ್ಮ ಇಂಡಸ್ಟ್ರಿ ಬೆಳೆದಿದೆ. ಆದರೆ, ಪೊಲೀಸರು ನನಗೆ ಸೂಕ್ತ ರಕ್ಷಣೆ ನೀಡಿದರೆ ನಾನು ಇದನ್ನು ಬಳಸುವವರ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದ್ದರು.
Comments are closed.