ರಾಷ್ಟ್ರೀಯ

ಗಾಳಿಯಲ್ಲಿರುವ ಕರೊನಾ ​ಪತ್ತೆ ಮಾಡುವ ಸಾಧನ ಆವಿಷ್ಕಾರ

Pinterest LinkedIn Tumblr


ನವದೆಹಲಿ: ಕೋವಿಡ್​19 ಕಾಯಿಲೆಗೆ ಕಾರಣವಾಗುವ ಕರೊನಾ ವೈರಸ್​ ಸೇರಿ ಗಾಳಿಯಲ್ಲಿರುವ ಇತರ ಬ್ಯಾಕ್ಟೀರಿಯಾ, ವಿಷಕಾರಿ ಕಣಗಳನ್ನು ಪತ್ತೆಹಚ್ಚುವ ಸಾಧನವನ್ನು ರಷ್ಯಾ ಕಂಡುಹಿಡಿದಿದೆ. ವಾತಾವರಣದಲ್ಲಿರುವ ವೈರಸ್​ ಹಾಗೂ ರೋಗಕಾರಕ ಕಣಗಳ ಬಗ್ಗೆ ಕೆಲವೇ ಸೆಕೆಂಡ್​ಗಳಲ್ಲಿ ಈ ಸಾಧನ ಮಾಹಿತಿ ನೀಡಲಿದೆ ಎಂದು ರಷ್ಯನ್​ ಮಾಧ್ಯಮಗಳು ವರದಿ ಮಾಡಿವೆ.

ಈ ಸಾಧನವನ್ನು ಡಿಟೆಕ್ಟರ್​ ಬಯೋ ಎಂದು ಕರೆಯಲಾಗಿದೆ. ರಷ್ಯಾದ ಝೆನಿತ್​ ಕ್ಯಾಮರಾಗಳ ಉತ್ಪಾದಕರಾದ ಕೆಎಂಝಡ್​ ಕಂಪನಿ ಇದನ್ನು ಉತ್ಪಾದಿಸಿದೆ. ವಿಶೇಷವೆಂದರೆ, ಕರೊನಾಗೆ ಜಗತ್ತಿನಲ್ಲಿ ಮೊದಲ ಲಸಿಕೆ ಉತ್ಪಾದಿಸಿ, ನೋಂದಣಿ ಮಾಡಿದ ಮಾಸ್ಕೋದ ಸರ್ಕಾರಿ ಅಧೀನದ ಗಮಾಲಿಯಾ ಸಂಸ್ಥೆಯೂ ಕೂಡ ಇದರಲ್ಲಿ ಭಾಗಿಯಾಗಿದೆ.

ಈ ಸಾಧನ ಚಿಕ್ಕದಾಗೇನಿಲ್ಲ, ಅಂದಾಜು ರೆಫ್ರಿಜರೇಟರ್​ ಗಾತ್ರದಲ್ಲಿದೆ. ಹಲವು ಕಾರ್ಯಗಳನ್ನು ಮಾಡುವ ಸಾಧನಗಳನ್ನು ಅಥನಾ ಪ್ರಯೋಗಾಲಯಗಳನ್ನೇ ಒಂದರ ಮೇಲೊಂದರಂತೆ ಸೇರಿದಂತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ವಾತಾವರಣದಲ್ಲಿರುವ ಗಾಳಿಯನ್ನು ಸೆಳೆದುಕೊಳ್ಳುವ ಈ ಸಾಧನ ವೈರಸ್​ಗಳಿರುವ ಬಗ್ಗೆ 10- 15 ಸೆಕೆಂಡ್​ಗಳಲ್ಲಿ ಮಾಹಿತಿ ನೀಡುತ್ತದೆ. ಎರಡು ಹಂತಗಳಲ್ಲಿ ವಿಶ್ಲೇಷಣೆ ನಡೆಸಿ ಫಲಿತಾಂಶ ಪ್ರಕಟಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮೊದಲ ಹಂತದಲ್ಲಿ ಗಾಳಿಯನ್ನೆಲ್ಲ ಸೆಳೆದುಕೊಂಡು ಅದರ ಪರೀಕ್ಷೆ ನಡೆಸುತ್ತದೆ. ಅದರಲ್ಲಿ ವೈರಸ್​ಗಳಿದ್ದರೆ ಗುರುತಿಸಿ ಕೂಡಲೇ ಎಚ್ಚರಿಕೆ ನೀಡುತ್ತದೆ. ಎರಡನೇ ಹಂತದಲ್ಲಿ ಆ ವೈರಸ್​ಗಳು ಅಥವಾ ರೋಗಕಾರಕಗಳು ಯಾವವು ಎಂಬುದನ್ನು ಪತ್ತೆ ಹಚ್ಚುತ್ತದೆ. ಇದಕ್ಕೆ ಒಂದರಿಂದ-ಎರಡು ತಾಸುಗಳು ಬೇಕಾಗುತ್ತದೆ ಎನ್ನಲಾಗಿದೆ.
ಇದನ್ನು ಸಾರ್ವಜನಿಕ ಸ್ಥಳಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ, ಮೊದಲಾದ ಕಡೆಗಳಲ್ಲಿ ಬಳಸುವ ಉದ್ದೇಶದಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.

Comments are closed.