ನವದೆಹಲಿ: ಒಂದು ಕಾಲದಲ್ಲಿ ಮನೆಮನೆಗೆ ದಿನಪತ್ರಿಕೆಗಳನ್ನು ಹಾಕುತ್ತ ಜೀವನ ಸಾಗಿಸುತ್ತಿದ್ದ ಹುಡುಗನೊಬ್ಬ ಈಗ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್‌ರತ್ನ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಆ ಹುಡುಗನೇ ಪ್ಯಾರಾಲಿಂಪಿಕ್ ಗೇಮ್ಸ್ ಸ್ವರ್ಣ ಪದಕ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು.
ತಮಿಳುನಾಡಿನ 25 ವರ್ಷದ ಮರಿಯಪ್ಪನ್ ತಂಗವೇಲು 2016ರ ರಿಯೋ ಪ್ಯಾರಾಲಿಂಪಿಕ್‌ನಲ್ಲಿ ಪುರುಷರ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಈ ವರ್ಷ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿರುವ ಐವರು ಕ್ರೀಡಾಪಟುಗಳಲ್ಲಿ ಅವರೂ ಒಬ್ಬರಾಗಿದ್ದಾರೆ. ಶನಿವಾರ ನಡೆಯಲಿರುವ ವರ್ಚುವಲ್ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಈ ಗೌರವ ಸ್ವೀಕರಿಸಲಿದ್ದಾರೆ.
ಬಸ್ ಒಂದು ಬಲಗಾಲನ್ನು ಜಜ್ಜಿ 5ನೇ ವಯಸ್ಸಿನಲ್ಲೇ ಅಂಗವಿಕಲರಾಗಿದ್ದ ತಂಗವೇಲು ಇಷ್ಟು ಉನ್ನತ ಪ್ರಶಸ್ತಿ ಪಡೆಯುವ ಬಗ್ಗೆ ಎಂದೂ ಕನಸು ಕಂಡಿರಲಿಲ್ಲ. ‘2012ರಿಂದ 2015ರವರೆಗೆ 3 ವರ್ಷಗಳ ಕಾಲ ನಾನು ಅಮ್ಮನಿಗೆ ಕುಟುಂಬವನ್ನು ನಡೆಸಲು ನೆರವಾಗುವ ಸಲುವಾಗಿ ಎಲ್ಲವನ್ನೂ ಮಾಡಿದ್ದೆ. ಬೆಳಗ್ಗೆ ದಿನಪತ್ರಿಕೆಗಳನ್ನು ಹಾಕುತ್ತಿದ್ದೆ. 2-3 ಕಿಲೋಮೀಟರ್ ದೂರ ನಡೆದು ಮನೆಮನೆಗೆ ಪತ್ರಿಕೆಗಳನ್ನು ವಿತರಿಸುತ್ತಿದ್ದೆ. ಬಳಿಕ ಕಟ್ಟಡ ಕಾಮಗಾರಿಗಳಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದೆ. ಪ್ರತಿದಿನ 200 ರೂ. ವೇತನ ಸಿಗುತ್ತಿತ್ತು’ ಎಂದು ತಂಗವೇಲು ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.
‘ದಿನಗಳು ಕಳೆದಿವೆ. ಆದರೆ ನಿನ್ನೆಯವರೆಗೂ ಆ ದಿನಗಳಿದ್ದಂತೆ ಅನಿಸುತ್ತಿದೆ. ಆ ದಿನಗಳನ್ನು ನೆನೆಸಿಕೊಂಡಾಗ ಈಗಲೂ ರೋಮಾಂಚನವಾಗುತ್ತದೆ. ನಾನು ಇಷ್ಟರವರೆಗೆ ಬರುವೆ ನಡೆದುಬರುವೆನೆಂದು ಎಂದೂ ಯೋಚಿಸಿರಲಿಲ್ಲ’ ಎಂದು ತಂಗವೇಲು ಹೇಳಿದ್ದಾರೆ.
2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನೂ ಜಯಿಸಿದ್ದ ತಂಗವೇಲು, ಪ್ರಸಕ್ತ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಮುಂದಿನ ವರ್ಷದ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಅವರ ಕಿರಿಯ ಸಹೋದರ ಈಗ ತವರೂರು ಸಲೇಂನಲ್ಲಿ ಕಾನೂನು ವಿದ್ಯಾಭ್ಯಾಸ ಪಡೆಯುತ್ತಿದ್ದರೆ, ಸಹೋದರಿಗೆ ವಿವಾಹ ಮಾಡಿಸಿದ್ದಾರೆ.
ತಂಗವೇಲು ಅವರ ಬಾಲ್ಯದಲ್ಲೇ ಅವರ ತಂದೆ, ಅವರನ್ನು ಬಿಟ್ಟುಹೋಗಿದ್ದರು. ಬಳಿಕ ತಾಯಿ ಒಬ್ಬರೇ ಕುಟುಂಬವನ್ನು ನಡೆಸಿದ್ದರು. ತಾಯಿ ತರಕಾರಿ ವ್ಯಾಪಾರದೊಂದಿಗೆ ದಿನಗೂಲಿಯನ್ನೂ ಮಾಡುತ್ತಿದ್ದರು.
2013ರಲ್ಲಿ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಆರ್. ಸತ್ಯನಾರಾಯಣ ಅವರು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ವೇಳೆ ತಂಗವೇಲು ಪ್ರತಿಭೆಯನ್ನು ಗುರುತಿಸಿ ಬೆಂಗಳೂರಿಗೆ ಹೆಚ್ಚಿನ ತರಬೇತಿಗಾಗಿ ಕರೆತಂದಿದ್ದರು. ಬಳಿಕ ಅವರ ಜೀವನವೇ ಬದಲಾಗಿ ಹೋಯಿತು. 2018ರಲ್ಲಿ ಸಾಯ್‌ನಿಂದ ಅವರು ಎ ದರ್ಜೆಯ ಕೋಚ್ ಹುದ್ದೆಗೆ ನೇಮಕಗೊಂಡಿದ್ದರು. ಇದರಿಂದ ಈಗ ಅವರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಅವರು ತರಬೇತಿಗಾಗಿ ಕೇಂದ್ರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಅನುದಾನ ಪಡೆಯುತ್ತಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಟಿ-42 ಹೈಜಂಪ್ ವಿಭಾಗದಲ್ಲಿ ಈಗಾಗಲೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಈ ಸಾಧನೆ ಮಾಡಿದ್ದರು. ಟೋಕಿಯೋದಲ್ಲೂ ಸ್ವರ್ಣ ಪದಕ ಗೆಲ್ಲುವ ಜತೆಗೆ ಅವರು 2 ಮೀಟರ್ ಎತ್ತರವನ್ನು ಮೀರಿಸಿ ವಿಶ್ವದಾಖಲೆ ಬರೆಯುವ ಗುರಿಯನ್ನೂ ಹೊಂದಿದ್ದಾರೆ. ಇದಕ್ಕಾಗಿ ಅವರು ಹಾಲಿ ಜೀವನಶ್ರೇಷ್ಠ 1.89 ಮೀಟರ್‌ಗಿಂತ 11 ಸೆಂಟಿಮೀಟರ್ ಎತ್ತರ ಹಾರಬೇಕಾಗಿದೆ. ಟಿ-42 ವಿಭಾಗದಲ್ಲಿ 1.96 ಮೀಟರ್ ಹಾಲಿ ವಿಶ್ವದಾಖಲೆಯಾಗಿದೆ.
ಟೋಕಿಯೋದಲ್ಲಿ ಅವರು ಸ್ವರ್ಣ ಜಯಿಸಿದರೆ, 2 ಪ್ಯಾರಾಲಿಂಪಿಕ್‌ಗಳಲ್ಲಿ ಚಿನ್ನ ಜಯಿಸಿದ ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ (2004, 2016) ದಾಖಲೆ ಸರಿಗಟ್ಟಲಿದ್ದಾರೆ. ‘ಪ್ರತಿ ದಿನ 2 ಬಾರಿ ಅಭ್ಯಾಸ ನಡೆಸುತ್ತೇನೆ. ಬೆಳಗ್ಗೆ 7ರಿಂದ 9 ಮತ್ತು ಸಂಜೆ 4ರಿಂದ 6ರವರೆಗೆ ತರಬೇತಿ ಪಡೆಯುತ್ತೇನೆ. ನನ್ನ ಓಟದ ವೇಗವನ್ನು ಹೆಚ್ಚಿಸಬೇಕಾಗಿದೆ ಎಂದು ಕೋಚ್ ಹೇಳಿದ್ದಾರೆ. ಹೀಗಾಗಿ ನಾನು ಈಗಿನ ದಿನಗಳಲ್ಲಿ 50 ಮೀಟರ್ ದೂರದ ರೇಸ್‌ನಲ್ಲೂ ಪಾಲ್ಗೊಳ್ಳುತ್ತಿದ್ದೇನೆ’ ಎಂದು ತಂಗವೇಲು ಹೇಳಿದ್ದಾರೆ.
Comments are closed.