
ನವದೆಹಲಿ (ಆ. 26): ಹೆಂಡತಿ ಮತ್ತು ಅಮ್ಮನನ್ನು ಹತ್ಯೆ ಮಾಡಿದ ಆರೋಪದಲ್ಲಿ ಭಾರತದ ಮಾಜಿ ಗುಂಡು ಎಸೆತ (ಶಾಟ್ ಪುಟ್) ಆಟಗಾರ ಇಕ್ಬಾಲ್ ಸಿಂಗ್ ಬೋಪರಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕದಲ್ಲಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದ ಇಕ್ಬಾಲ್ ಸಿಂಗ್ ಡಬಲ್ ಮರ್ಡರ್ ಕೇಸ್ನಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಅಮೆರಿಕದ ವಾಷಿಂಗ್ಟನ್‍ನ ರಾಕ್‍ಹುಡ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಇಕ್ಬಾಲ್ ಸಿಂಗ್ ತಮ್ಮ ಹೆಂಡತಿ ಮತ್ತು ತಾಯಿಯನ್ನು ಭಾನುವಾರ ಮಾರಕಾಸ್ತ್ರಗಳಿಂದ ಇರಿದು, ಕೊಲೆ ಮಾಡಿದ್ದಾರೆ. 63 ವರ್ಷದ ಇಕ್ಬಾಲ್ ಸಿಂಗ್ 1983ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದಿದ್ದರು. ಇಬ್ಬರನ್ನು ಹತ್ಯೆ ಮಾಡಿದ್ದ ಅವರು ಈಗ ಜೈಲು ಸೇರಿದ್ದಾರೆ.
ಇಕ್ಬಾಲ್ ಸಿಂಗ್ ಮಕ್ಕಳಿಂದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಇಕ್ಬಾಲ್ ಸಿಂಗ್ ಅವರ ಮನೆಗೆ ತೆರಳಿದಾಗ ಅವರ ತಾಯಿ ಮತ್ತು ಹೆಂಡತಿ ಸಾವನ್ನಪ್ಪಿದ್ದರು. ಆ ಡಬಲ್ ಮರ್ಡರ್ ಬಗ್ಗೆ ವಿಚಾರಣೆ ನಡೆಸಿದಾಗ ಇಕ್ಬಾಲ್ ಸಿಂಗ್ ಅವರೇ ಕೊಲೆ ಮಾಡಿದ್ದಾರೆ ಎಂಬುದು ಖಚಿತವಾಗಿದೆ. ಈ ಬಗ್ಗೆ ಇಕ್ಬಾಲ್ ಸಿಂಗ್ ಅವರ ಸ್ನೇಹಿತ ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನನಗೆ ಇಕ್ಬಾಲ್ ಸಿಂಗ್ ಕೊಲೆ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಆತ ಬಹಳ ಸ್ನೇಹಜೀವಿಯಾಗಿದ್ದ. ನಾನು ಅನೇಕ ಬಾರಿ ಆತನ ಮನೆಗೆ ಹೋಗಿ ಉಳಿದುಕೊಂಡಿದ್ದೆ. ಅಮ್ಮ ಮತ್ತು ಹೆಂಡತಿಯನ್ನು ಅವನು ಬಹಳ ಪ್ರೀತಿಸುತ್ತಿದ್ದ. ಅಂಥವನು ಅವರನ್ನು ಕೊಲೆ ಮಾಡಿದ್ದಾನೆಂದರೆ ನನಗೆ ನಂಬಲಾಗುತ್ತಿಲ್ಲ ಎಂದಿದ್ದಾರೆ.
ಪೊಲೀಸರು ಇಕ್ಬಾಲ್ ಸಿಂಗ್ ಅವರ ಮನೆಗೆ ಹೋಗಿ ನೋಡಿದಾಗ ಅವರ ಹೆಂಡತಿ ಮತ್ತು ಅಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇಕ್ಬಾಲ್ ಸಿಂಗ್ ದೇಹದ ಮೇಲೂ ಅನೇಕ ಗಾಯದ ಗುರುತಿತ್ತು. ಅವರಿಬ್ಬರನ್ನೂ ಕೊಂದ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಆತ ಯತ್ನಿಸಿದ್ದ ಎನ್ನಲಾಗಿದೆ. ಕ್ರೀಡಾ ವೃತ್ತಿಯಿಂದ ಹಿಂದೆ ಸರಿದ ಬಳಿಕ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಇಕ್ಬಾಲ್ ಸಿಂಗ್ ನಂತರ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ. ಆತ ಜಲಂಧರ್ನಲ್ಲಿ ಕೆಲವು ಕಾಲ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ. ನಂತರ ಅಮೆರಿಕಕ್ಕೆ ವಲಸೆ ಹೋಗಿ, ಅಲ್ಲಿಯೇ ಸೆಟಲ್ ಆಗಿದ್ದ. ಅವರ ಮಕ್ಕಳಿಬ್ಬರೂ ಒಳ್ಳೆಯ ಉದ್ಯೋಗದಲ್ಲಿದ್ದು, ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಇಕ್ಬಾಲ್ ಸಿಂಗ್ ತಾಯಿ ನಾಸಿಬ್ ಕೌರ್ ಮತ್ತು ಹೆಂಡತಿ ಜಸ್ಪಾಲ್ ಕೌರ್ ಇಬ್ಬರೂ ಕೊಲೆಯಾದವರು.
ಕೊಲೆ ಮಾಡಿದ ಬಳಿಕ ತನ್ನ ಮಕ್ಕಳಿಗೆ ಫೋನ್ ಮಾಡಿದ್ದ ಇಕ್ಬಾಲ್ ಸಿಂಗ್ ನಾನು ನಿನ್ನ ಅಮ್ಮ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದೇನೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸು. ನೀನು ಬೇಗ ಇಲ್ಲಿಗೆ ಬಾ ಎಂದು ಹೇಳಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಡಬಲ್ ಮರ್ಡರ್ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ.
Comments are closed.