ನವದೆಹಲಿ; ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಇಂದು ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಸಭೆಯ ಆರಂಭದಲ್ಲಿ ಕಾಂಗ್ರೆಸ್ ಕೆಲ ಹಿರಿಯ ಮುಖಂಡರು ರಾಹುಲ್ ಗಾಂಧಿ ನಡುವೆ ವಾಗ್ಸಮರ ನಡೆದಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೆಲ ನಾಯಕರು ಪತ್ರ ಬರೆಯುವ ಮೂಲಕ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ಕಪಿಲ್ ಸಿಬಾಲ್ ಮತ್ತು ಗುಲಾಂ ನಬಿ ಆಜಾದ್ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು.
ಬೆಳಗ್ಗೆ ರಾಹುಲ್ ಗಾಂಧಿ ಹೇಳಿಕೆ ಸಂಬಂಧ ಟ್ವೀಟ್ ಮಾಡಿದ್ದ ಕಪಿಲ್ ಸಿಬಾಲ್, ನಾನು 30 ವರ್ಷದಿಂದ ಕಾಂಗ್ರೆಸ್ ನಿಷ್ಠಾವಂತ ಸದಸ್ಯನಾಗಿ, ಬಿಜೆಪಿ ಪರವಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಹೀಗಿದ್ದರೂ ಈ ಮಾತು ನಮಗೆ ಬೇಸರವಾಗಿದೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿ ಟ್ವೀಟ್ ಮಾಡಿದ್ದರು. ಅದಾದ ಬಳಿಕ ತಮ್ಮ ಟ್ವೀಟ್ ಅನ್ನು ಹಿಂಪಡೆದಿದ್ದರು.
ರಾಹುಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷಕ್ಕೆ ರಾಜೀನಾಮೆಗೂ ಸಿದ್ಧ ಎಂದು ಹೇಳಿದ್ದ ಗುಲಾಮ್ ನಬಿ ಆಜಾದ್ ಯೂ ಟರ್ನ್ ಹೊಡೆದಿದ್ದಾರೆ. ರಾಹುಲ್ ಗಾಂಧಿ ‘ಆ ರೀತಿ ಮಾತನಾಡಿಲ್ಲ’ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿಲ್ಲ ಎಂದು ನ್ಯೂಸ್ 18 ಜಾಲಕ್ಕೆ ಗುಲಾಮ್ ನಬಿ ಆಜಾದ್ ಸ್ಪಷ್ಟೀಕರಣ ನೀಡಿದ್ದಾರೆ.
ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಲು ಸಿಡಬ್ಲ್ಯೂಸಿ ಸಭೆಯಲ್ಲಿ ನಾಯಕರಿಂದ ಒತ್ತಡ ಹೆಚ್ಚುತ್ತಿದೆ. ಈಗಾಗಲೇ ಎಐಸಿಸಿ ಖಜಾಂಚಿ ಅಹಮದ್ ಪಟೇಲ್, ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್ ಸೇರಿದಂತೆ ಹಲವು ನಾಯಕರಿಂದಲೂ ಒತ್ತಡ ಹೆಚ್ಚಾಗುತ್ತಿದೆ. ಜೊತೆಗೆ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದ್ದಾರೆ.
Comments are closed.