
ನವದೆಹಲಿ; ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಪಕ್ಷದಲ್ಲಿ ಎರಡು ಬಣಗಳಾಗಿದ್ದು, ಬಿ ಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಇಂದು ಎಐಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಯಕತ್ವ ವಿಷಯವಾಗಿ ಪಕ್ಷದ ಹಿರಿಯ ಮುಖಂಡರು ಹಾಗೂ ರಾಹುಲ್ ಗಾಂಧಿ ನಡುವೆ ಮಾತಿನ ಸಮರ ನಡೆದಿದೆ. ಒಂದು ಬಣದ ನಾಯಕರು ಗಾಂಧಿಯೇತರ ಕುಟುಂಬದವರು ಅಧ್ಯಕ್ಷರಾಗಬೇಕು ಎಂದು ಹಠ ಹಿಡಿದಿದ್ದರೆ ಮತ್ತೊಂದು ಬಣದ ನಾಯಕರು ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರಲ್ಲಿ ಅಹ್ಮದ್ ಪಟೇಲ್ ಅವರು ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.
ಸಭೆಯಲ್ಲಿ ಪತ್ರದ ವಿಷಯದಿಂದ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆದಾಗ ರಾಹುಲ್ ಗಾಂಧಿ ಪರ ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಬ್ಯಾಟಿಂಗ್ ಮಾಡಿದ್ದಾರೆ. ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರೇ ಸೂಕ್ತ. ಅವರೇ ಪೂರ್ಣಾವಧಿ ಅಧ್ಯಕ್ಷರಾಗಲಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ರಾಹುಲ್ ಗಾಂಧಿ ಅವರು ನಾಯಕತ್ವ ಬದಲಾವಣೆ ಸಂಬಂಧ ಪತ್ರ ಬರೆದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಸಮಯದಲ್ಲಿ ಕೆಲ ನಾಯಕರು ಪತ್ರ ಬರೆದು, ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕಪಿಲ್ ಸಿಬಾಲ್ ಮತ್ತು ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿಯೂ ಹೇಳಿದ್ದರು.
ಇನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರೇ ಮುಂದುವರೆಯಲಿ ಎಂದು ಪಕ್ಷದ ಹಲವು ನಾಯಕರು ಒತ್ತಾಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ ಇಂತಹ ಸಮಯದಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ರಾಹುಲ್ ಗಾಂಧಿ ಅವರೇ ಸಮರ್ಥ ನಾಯಕರು ಎಂದು ಅವರ ಪರ ಬ್ಯಾಟ್ ಬೀಸಿದ್ದಾರೆ.
Comments are closed.