
ನವದೆಹಲಿ (ಆ. 21): ಕೊರೋನಾಗೆ ಔಷಧ ಕಂಡುಹಿಡಿದಿದ್ದೇನೆ ಎಂದು ಘೋಷಿಸಿಕೊಂಡಿದ್ದ ಆಯುರ್ವೇದ ವೈದ್ಯನಿಗೆ ಸುಪ್ರೀಂ ಕೋರ್ಟ್ 10,000 ರೂ. ದಂಡ ವಿಧಿಸಿದೆ. ಹರಿಯಾಣ ಮೂಲದ ಡಾ. ಓಂಪ್ರಕಾಶ್ ವೈದ್ ಗ್ಯಾಂತರ ಸುಪ್ರೀಂಕೋರ್ಟ್ನ ಈ ತೀರ್ಪಿನಿಂದ ಅಸಮಾಧಾನಗೊಂಡಿದ್ದಾರೆ.
ಡಾ. ಓಂಪ್ರಕಾಶ್ ತಾನು ಕಂಡುಹಿಡಿದಿರುವ ಔಷಧವನ್ನು ಕೊರೋನಾಗೆ ಚಿಕಿತ್ಸೆಯಾಗಿ ಬಳಸಬಹುದು ಎಂದು ಹೇಳಿಕೊಂಡಿದ್ದರು. ದೇಶದ ಎಲ್ಲ ವೈದ್ಯರು ಮತ್ತು ಆಸ್ಪತ್ರೆಗಳು ತನ್ನ ಔಷಧಿಯನ್ನು ಕೊರೋನಾ ರೋಗಿಗಳಿಗೆ ನೀಡಬಹುದು ಎಂದು ಸಂದರ್ಶನಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 10,000 ರೂ.ಗಳ ದಂಡ ವಿಧಿಸಿದೆ.
ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ (ಬಿಎಎಂಎಸ್)ಯಲ್ಲಿ ಡಿಗ್ರಿ ಪಡೆದಿರುವ ಡಾ. ಓಂ ಪ್ರಕಾಶ್ ತಾನು ಕಂಡುಹಿಡಿದ ಔಷಧವನ್ನು ಕೊರೋನಾ ಚಿಕಿತ್ಸೆಗೆ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದರು. ತಾನು ಕಂಡುಹಿಡಿದಿರುವ ಔಷಧದಿಂದ ಮಾರಣಾಂತಿಕ ರೋಗವಾದ ಕೊರೋನಾ ಗುಣವಾಗಲಿದೆ ಎಂದು ಅವರು ಘೋಷಿಸಿಕೊಂಡಿದ್ದರು.
ಸುಪ್ರೀಂಕೋರ್ಟ್ನ ನ್ಯಾ. ಸಂಜಯ್ ಕೆ. ಕೌಲ್ ನೇತೃತ್ವದ ನ್ಯಾಯಪೀಠ ಆ ಅರ್ಜಿಯನ್ನು ತಿರಸ್ಕರಿಸಿದ್ದು, ಈ ರೀತಿ ಪಿಐಎಲ್ ಸಲ್ಲಿಸಿದ್ದಕ್ಕೆ ತರಾಟೆ ತೆಗೆದುಕೊಂಡಿದೆ. ಪ್ರಚಾರ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ಡಾ. ಓಂಪ್ರಕಾಶ್ ಈ ರೀತಿ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅರ್ಜಿಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯ ದಂಡ ವಿಧಿಸಿದೆ.
ಕೊರೋನಾ ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ತೀವ್ರಗೊಂಡಾಗ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆ 29 ಲಕ್ಷ ದಾಟಿದೆ. ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 20ರಿಂದ 37 ಸಾವಿರಕ್ಕೂ ಪ್ರಕರಣಗಳು ಗೋಚರಿಸಿದ್ದವು.
Comments are closed.