ರಾಷ್ಟ್ರೀಯ

ಜಮ್ಮು-ಕಾಶ್ಮೀರದಿಂದ 10,000 ಅರೆಸೈನಿಕ ಪಡೆಗಳನ್ನು ತಕ್ಷಣವೇ ಹಿಂಪಡೆಯಲು ಕೇಂದ್ರದಿಂದ ಆದೇಶ

Pinterest LinkedIn Tumblr


ನವ ದೆಹಲಿ (ಆಗಸ್ಟ್‌ 19); ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಿಂದ ಸುಮಾರು 10,000 ಅರೆಸೈನಿಕ ಪಡೆಗಳ ಸಿಬ್ಬಂದಿಯನ್ನು (ಅಥವಾ 100 ತುಕಡಿ) ತಕ್ಷಣವೇ ಹಿಂಪಡೆಯಲು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಕೇಂದ್ರಾಡಳಿತ ಪ್ರದೇಶದಲ್ಲಿ (ಯುಟಿ) ನಿಯೋಜಿಸುವುದರ ಕುರಿತು ಗೃಹ ಸಚಿವಾಲಯ ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಆಗಸ್ಟ್ 05ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಒಟ್ಟು 100 ಸಿಎಪಿಎಫ್ ತುಕಡಿಗಳನ್ನು ಕಂಪೆನಿಗಳನ್ನು ತಕ್ಷಣ ಹಿಂತೆಗೆದುಕೊಳ್ಳಲು ಮತ್ತು ದೇಶದ ಮೂಲ ಸ್ಥಳಗಳಿಗೆ ಹಿಂದಿರುಗಿಸಲು ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ನ್ಯೂಸ್‌18ಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆ ನಿರ್ದೇಶನದಂತೆ, ಕೇಂದ್ರ ರಿಸರ್ವ್ ಪೊಲೀಸ್ ಪಡೆಯ (ಸಿಆರ್‌ಪಿಎಸ್‌) ಒಟ್ಟು 40 ತುಕಡಿಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ ಮತ್ತು ಸಶಸ್ತ್ರ ಸೀಮಾ ಬಾಲ್‌ನ ತಲಾ 20 ತುಕಡಿಗಳನ್ನು ಈ ವಾರದೊಳಗೆ ಜಮ್ಮು ಮತ್ತು ಕಾಶ್ಮೀರದಿಂದ ಹೊರತೆಗೆಯಲಾಗುವುದು ಎಂದು ತಿಳಿದುಬಂದಿದೆ .

ಕೇಂದ್ರ ಗೃಹ ಸಚಿವಾಲಯವು ಕಳೆದ ಮೇ ತಿಂಗಳಿನಲ್ಲಿ ಸುಮಾರು 10 ಸಿಎಪಿಎಫ್ ಸೈನಿಕ ತುಕಡಿಗಳನ್ನು ಕೇಂದ್ರಾಡಳಿತ ಪ್ರದೇಶದಿಂದ ಹಿಂತೆಗೆದುಕೊಂಡಿತ್ತು. ಇತ್ತೀಚಿನ ಡಿ-ಇಂಡಕ್ಷನ್ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಸುಮಾರು 60 ಬೆಟಾಲಿಯನ್‌ಗಳ ಸಿಆರ್‌ಪಿಎಸ್‌ ಸೈನಿಕರು ಮಾತ್ರ ಇರಲಿದ್ದಾರೆ (ಪ್ರತಿ ಬೆಟಾಲಿಯನ್‌ನಲ್ಲಿ ಸುಮಾರು 1,000 ಸಿಬ್ಬಂದಿ) ಇದರ ಹೊರತಾಗಿ ಇತರ ಸಿಎಪಿಎಫ್‌ಗಳ ಕೆಲವೇ ತುಕಡಿಗಳು ಇನ್ನು ಕಣಿವೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿವೆ ಎನ್ನಲಾಗುತ್ತಿದೆ.

Comments are closed.