
ನವದೆಹಲಿ: ಕಳೆದ 3 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇದೀಗ ದಿಢೀರ್ ಏರಿಕೆಯಾಗಿದೆ. ಬುಧವಾರ ದೇಶದಲ್ಲಿ 64,531 ಹೊಸ ಕೇಸ್ ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,67,274ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 1092 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 52,889ಕ್ಕೆ ಏರಿದೆ. ಒಂದೇ ದಿನ ಈ ಮಟ್ಟದಲ್ಲಿ ಸಾವನ್ನಪ್ಪಿರುವುದು 2ನೇ ದೈನಂದಿನ ಗರಿಷ್ಟವಾಗಿದೆ. ಈ ಹಿಂದೆ ಜು.27ರಂದು ಒಂದೇ ದಿನ 1119 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ವರೆಗಿನ ಗರಿಷ್ಠ ದೈನಂದಿನ ಸಾವಿನ ದಾಖಲೆಯಾಗಿತ್ತು.
ಈ ನಡುವೆ 27,67,274 ಮಂದಿ ಸೋಂಕಿತರ ಪೈಕಿ ಒಂದೇ ದಿನ 59,903 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 20,37,871ಕ್ಕೆ ತಲುಪಿದೆ. ಭಾರತದಲ್ಲಿ ಇನ್ನೂ 6,76,514 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ರಾಜ್ಯವಾರು ಕೊರೋನಾ ಪೀಡಿತರತ್ತ ಗಮನಹರಿಸಿದರೆ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 11,119 ಮಂದಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಆಂಧ್ರಪ್ರದೇಶದಲ್ಲಿ 9652, ಕರ್ನಾಟಕದಲ್ಲಿ 7665 ಮಂದಿ, ಉತ್ತರಪ್ರದೇಶದಲ್ಲಿ 4218 ಮಂದಿ ಹಾಗೂ ಪಶ್ಚಿಮ ಬಂಗಾಳದಲ್ಲಿ 3175 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ದೇಶದಲ್ಲಿ 24 ಗಂಟೆಗಳಲ್ಲಿ ಬರೋಬ್ಬರಿ ದಾಖಲೆಯ 8,01,518 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ಈವರೆಗೂ ಅಂದರೆ ಆಗಸ್ಟ್ 18ರವರೆಗೂ 3,17,42,782 ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.
Comments are closed.