
ನವದೆಹಲಿ(ಆ. 18): ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವೈಮಾನಿಕ ಹಾರಾಟಕ್ಕೆ ಕೇಂದ್ರ ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಜುಲೈ ತಿಂಗಳಿಂದಲೂ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಅರಬ್ ಸಂಸ್ಥಾನ, ಕತಾರ್ ಮತ್ತು ಮಾಲ್ಡೀವ್ಸ್ ದೇಶಗಳೊಂದಿಗೆ ದ್ವಿಪಕ್ಷೀಯ ವಿಮಾನ ಹಾರಾಟ ಸೇವೆ ನಡೆಸುತ್ತಿರುವ ಭಾರತ ಈಗ ಇನ್ನೂ 13 ದೇಶಗಳ ಜೊತೆ ಮಾತುಕತೆ ನಡೆಸುತ್ತಿದೆ.
ಆಸ್ಟ್ರೇಲಿಯಾ, ಇಟಲಿ, ಜಪಾನ್, ನ್ಯೂಜಿಲೆಂಡ್, ನೈಜೀರಿಯಾ, ಬಹರೇನ್, ಇಸ್ರೇಲ್, ಕೀನ್ಯಾ, ಫಿಲಿಪ್ಪೈನ್ಸ್, ರಷ್ಯಾ, ಸಿಂಗಾಪುರ್, ಸೌತ್ ಕೊರಿಯಾ ಮತ್ತು ಥಾಯ್ಲೆಂಡ್ ದೇಶಗಳ ಜೊತೆ ದ್ವಿಪಕ್ಷೀಯ ಏರ್ಬಬಲ್ ವ್ಯವಸ್ಥೆ (ವಿಮಾನ ಹಾರಾಟ) ಏರ್ಪಡಿಸಲು ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ.
ಈ 13 ದೇಶಗಳಲ್ಲದೆ, ತನ್ನ ನೆರೆ ರಾಷ್ಟ್ರಗಳ ಜೊತೆ ವೈಮಾನಿಕ ಸೇವೆ ಪುನಾರಂಭಿಸಲು ಸರ್ಕಾರ ಯೋಜಿಸಿದೆ. ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ ಎಂದು ಪುರಿ ತಿಳಿಸಿದ್ದಾರೆ. ಈ ಪ್ರಸ್ತಾಪದಲ್ಲಿ ಚೀನಾ ಮತ್ತು ಪಾಕಿಸ್ತಾನದ ಹೆಸರು ಇಲ್ಲ.
ಈಗ ಪಟ್ಟಿ ಮಾಡಿರುವ ದೇಶಗಳಲ್ಲದೆ ಬೇರೆ ದೇಶಗಳೊಂದಿಗೂ ನಾವು ದ್ವಿಪಕ್ಷೀಯ ವಿಮಾನ ಸೇವೆ ವ್ಯವಸ್ಥೆ ಮಾಡಿಕೊಳ್ಳಲು ಸಿದ್ಧವಿದ್ದೇವೆ. ಯಾವುದೇ ದೇಶದಲ್ಲಿ ಸಿಲುಕಿಕೊಂಡಿರುವ ಪ್ರತಿಯೊಬ್ಬ ಭಾರತೀಯನಿಗೂ ದೇಶಕ್ಕೆ ವಾಪಸ್ ಬರಲು ನಾವು ಅನುವು ಮಾಡಿಕೊಡುತ್ತೇವೆ ಎಂದಿದ್ದಾರೆ.
ಏರ್ ಬಬಲ್ ವ್ಯವಸ್ಥೆಯಲ್ಲಿ ಎರಡು ದೇಶಗಳ ನಡುವೆ ಎಲ್ಲಾ ಕಮರ್ಷಿಯಲ್ ಫ್ಲೈಟ್ಗಳ ಸೇವೆ ಲಭ್ಯವಿರುತ್ತದೆ. ಕೆಲ ಕೊರೋನಾ ಸಂಬಂಧಿತ ನಿಬಂಧನೆಗಳಿಗೆ ಒಳಪಟ್ಟು ಈ ವೈಮಾನಿಕ ಸೇವೆ ಇರಲಿದೆ.ಇದನ್ನೂ ಓದಿ: ತಮಿಳುನಾಡಿನ ಸ್ಟೆರ್ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ
ಮಾರ್ಚ್ನಲ್ಲಿ ಕೊರೋನಾ ಲಾಕ್ಡೌನ್ ಘೋಷಣೆ ಆದ ಬಳಿಕ ಎರಡು ತಿಂಗಳು ದೇಶೀಯ ವೈಮಾನಿಕ ಸೇವೆಯೂ ಸ್ಥಗಿತಗೊಂಡಿತ್ತು. ಮೇ 25ರ ನಂತರ ಸೀಮಿತ ಸಂಖ್ಯೆಯಲ್ಲಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಏರ್ಲೈನ್ಸ್ ಸಂಸ್ಥೆಗಳು ಮಾರ್ಚ್ ಮುನ್ನ ಹೊಂದಿದ್ದ ವಿಮಾನಗಳ ಶೇ 45ರಷ್ಟನ್ನು ಮಾತ್ರ ಬಳಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿಯಮ ವಿಧಿಸಿದೆ. ಕಡಿಮೆ ಸಂಖ್ಯೆಯಲ್ಲಿ ವಿಮಾನ ಹಾರಾಟ ಇದ್ದರೂ ಪ್ರತಿ ವಿಮಾನ ಶೇ. 50ರಷ್ಟು ಮಾತ್ರ ಪ್ರಯಾಣಿಕರಿಂದ ಭರ್ತಿಯಾಗುತ್ತಿದೆ. ಲಾಭದಲ್ಲಾಗುತ್ತಿರುವ ಇಳಿಕೆಯನ್ನು ಸರಿದೂಗಿಸಲು ವಿಮಾನ ಸಂಸ್ಥೆಗಳು ತನ್ನ ಸಿಬ್ಬಂದಿವರ್ಗದ ಸಂಬಳಕ್ಕೆ ಕತ್ತರಿಹಾಕಿವೆ.
Comments are closed.