
ನವದೆಹಲಿ: ಕಳೆದ 7 ತಿಂಗಳುಗಳಿಂದ ದೇಶದಲ್ಲಿ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಅಬ್ಬರ ಸತತ 3ನೇ ದಿನವೂ ಕಡಿಮೆಯಾಗಿರುವ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಮಂಗಳವಾರ 55,079 ಸೋಂಕಿತರು ಕಂಡು ಬಂದಿದ್ದು, ಇದರೊಂದಿಗೆ ದೇಶದಲ್ಲಿ ಈವರೆಗಿನ ಕೊರೋನಾ ಪೀಡಿತರ ಸಂಖ್ಯೆ 27,02,743ಕ್ಕೆ ಹೆಚ್ಚಳವಾಗಿದೆ.
ಮತ್ತೊಂದೆಡೆ ಸಾವಿನ ಪ್ರಮಾಣ ಕೂಡ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 876 ಮಂದಿ ಒಂದೇ ದಿನ ನಿಧನರಾಗಿದ್ದಾರೆ. ಇಲ್ಲಿಯವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 51,797 ಕ್ಕೆ ಏರಿಕೆಯಾಗಿದೆ.
ಆ.11ರಿಂದ ಆ.15ರವರೆಗೆ ಪ್ರತಿನಿತ್ಯ 60 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದರು. ಆ.13ರಂದು ದಾಖಲೆಯ 69 ಸಾವಿರದವರೆಗೂ ಸೋಂಕಿತರ ಸಂಖ್ಯೆ ತಲುಪಿತ್ತು. ಆಧರೆ, ಭಾನುವಾರ 56,507 ಮಂದಿಯಲ್ಲಿ ಮಾತ್ರ ಸೋಂಕು ಕಂಡು ಬಂದಿತ್ತು. ಅದು ಮಂಗಳವಾರ ಮತ್ತಷ್ಟು ಇಳಿಕೆಯಾಗಿದೆ. ಕಳೆದೊಂದು ವಾರದಿಂದ ಪ್ರತಿನಿತ್ಯ 900ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದರು. ಆದರೆ, ಒಂದು ವಾರದ ಬಳಿಕ ಮೃತರ ಸಂಖ್ಯೆ 900ಕ್ಕಿಂತ ಕೆಳಕ್ಕೆ ಇಳಿದಿದೆ.
ಈ ನಡುವೆ 27,02,743 ಮಂದಿ ಸೋಂಕಿತರ ಪೈಕಿ 19,77,780 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 6,73,166 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಇನ್ನು ದೇಶದಲ್ಲಿ 24 ಗಂಟೆಗಳಲ್ಲಿ ಬರೋಬ್ಬರಿ ದಾಖಲೆಯ 8,99,864 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ಈವರೆಗೂ 3,09,41,264 ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.
Comments are closed.