ರಾಷ್ಟ್ರೀಯ

ಶಾಸಕ ಮಹೇಶ್ ನೇಗಿಯೇ ತನ್ನ ಮಗುವಿನ ಅಪ್ಪ; ಮಗುವಿನ ಡಿಎನ್​ಎ ಟೆಸ್ಟ್ ಮಾಡಿಸಿ: ಮಹಿಳೆ ಸವಾಲು

Pinterest LinkedIn Tumblr

ಡೆಹ್ರಾಡೂನ್​: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿಯ ವಿರುದ್ಧ ರೇಪ್ ಕೇಸ್ ದಾಖಲಿಸಿರುವ ಮಹಿಳೆಯೊಬ್ಬರು, ತನ್ನ ಮಗುವಿನ ಅಪ್ಪ ನೇಗಿಯೇ ಆಗಿದ್ದು, ಮಗುವಿನ ಡಿಎನ್​ಎ ಟೆಸ್ಟ್ ಮಾಡಿಸಿ ಸವಾಲು ಹಾಕಿದ್ದಾರೆ.ಶಾಸಕ ನೇಗಿ 2016 ಮತ್ತು 2018ರ ನಡುವೆ ಅನೇಕ ಸಲ ತನ್ನ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆಯೂ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಅತ್ಯಾಚಾರ ದೂರು ದಾಖಲಿಸಿರುವ ಮಹಿಳೆ ವಿವಾಹಿತೆಯಾಗಿದ್ದು, ನೆಹರೂ ಕಾಲನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ಅತ್ಯಾಚಾರದ ಅಂಶ ಮತ್ತು ಮಗುವಿನ ಡಿಎನ್​ಎ ಪರೀಕ್ಷೆ ನಡೆಸುವಂತೆಯೂ ಅವರು ಕೋರಿದ್ದಾರೆ. ವಿವಾಹಿತ ಮಹಿಳೆ ಶಾಸಕ ನೇಗಿಯ ನೆರೆಯವರಾಗಿದ್ದು, 2016ರಲ್ಲಿ ತನ್ನ ತಾಯಿಗೆ ಆರಾಮ ಇಲ್ಲದೇ ಇದ್ದಾಗ ನೆರವು ಕೋರಿ ಶಾಸಕರನ್ನು ಭೇಟಿಯಾಗಿದ್ದರು.

ಇದಾಗಿ, 2016 ಮತ್ತು 2018ರ ನಡುವೆ ಶಾಸಕ ನೇಗಿ ಆಕೆಯನ್ನು ಮುಸ್ಸೋರಿ, ನೈನಿತಾಲ್​, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳಕ್ಕೆ ಕರೆದೊಯ್ದು ಅನೇಕ ಸಲ ಅತ್ಯಾಚಾರವೆಸಗಿದ್ದಾರೆ. ಈ ವಿಚಾರ ಬಹಿರಂಗ ಪಡಿಸದಂತೆ ನೇಗಿಯವರ ಪತ್ನಿ 25 ಲಕ್ಷ ರೂಪಾಯಿ ಆಮಿಷ ಒಡ್ಡಿದ್ದರು ಎಂಬ ಅಂಶವನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಡಿಜಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಶಾಸಕರ ಪತ್ನಿ ಕೂಡ ನೆಹರು ಕಾಲನಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದು, ಪತಿಯನ್ನು ಮಹಿಳೆಯೊಬ್ಬರು ಬ್ಲ್ಯಾಕ್​​ಮೇಲ್ ಮಾಡುತ್ತಿರುವುದಾಗಿ ಆರೋಪಿಸಿದ್ಧಾರೆ.

ಎರಡೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಡಿಜಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದರು.ಈ ವಿಚಾರವಾಗಿ ಶಾಸಕ ನೇಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ರೇಪ್ ಪ್ರಕರಣವೀಗ ರಾಜಕೀಯ ಸಂಚಲನ ಮೂಡಿಸಿದೆ. ಆದರೆ ಈ ಸಂಬಂಧ ಶಾಸಕ ನೇಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.