ರಾಷ್ಟ್ರೀಯ

ಪ್ರೇಮ ವಿವಾಹವಾಗಿ ಏಳೇ ತಿಂಗಳಿಗೆ ಯುವತಿ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್: ಪ್ರೀತಿಸಿ ಮದುವೆಯಾಗಿದ್ದ ಏಳು ತಿಂಗಳಲ್ಲೇ 20 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ನಗರದ ಮಲ್ಕಜ್‍ಗಿರಿ-ಮೇಡ್ಚಲ್ ಜಿಲ್ಲೆಯಲ್ಲಿ ನಡೆದಿದೆ.

ಕೀಸರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪಲ್ಲಿ ಗ್ರಾಮದ ನಿವಾಸಿ ತ್ರಿನಯಾಣಿ (20) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಮೃತ ತ್ರಿನಯಾಣಿ ಪತಿ ಅಕ್ಷಯ್ ಜೊತೆ ರಾಂಪಲ್ಲಿಯಲ್ಲಿ ವಾಸಿಸುತ್ತಿದ್ದಳು. ಆದರೆ ಮನೆಯಲ್ಲಿಯೇ ಇಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.

ತ್ರಿನಯಾಣಿ ಮತ್ತು ಅಕ್ಷಯ್ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿದ್ದು, ಎರಡು ಮನೆಯವರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಈ ಜೋಡಿ ಮನೆಯವರ ವಿರುದ್ಧ ಏಳು ತಿಂಗಳ ಹಿಂದೆ ವಿವಾಹವಾಗಿದ್ದರು. ಅಕ್ಷಯ್ ಕೆಲವು ದಿನಗಳಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಆದರೆ ತ್ರಿನಯಾಣಿ ಈ ಬಗ್ಗೆ ಯಾರಿಗೂ ಹೇಳಕೊಳ್ಳಲು ಸಾಧ್ಯವಾಗದೆ ಬೇಸರಗೊಂಡಿದ್ದಳು.

ದಿನೇ ದಿನೇ ಪತಿಯ ಕಿರುಕುಳ ಹೆಚ್ಚಾಗಿದ್ದು, ಇದರಿಂದ ನೊಂದು ತ್ರಿನಯಾಣಿ ಇಂದು ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪೊಲೀಸರು ಅಕ್ಷಯ್‍ನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಇತ್ತ ಪತಿ ಮತ್ತು ಅತ್ತೆ-ಮಾವಂದಿರ ಕಿರುಕುಳದಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೇ ಅಕ್ಷಯ್ ನಮ್ಮ ಮಗಳಿಗೆ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಿ ಮೃತಳ ಪೋಷಕರು ದೂರು ದಾಖಲಿಸಿದ್ದಾರೆ.

Comments are closed.