ಹೂಗ್ಲಿ: ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಗೂಂಡಾಗಿರಿ ಹೊಸದಲ್ಲ. ಅಲ್ಲಿ ರಾಜಕೀಯ ಪಕ್ಷಗಳ ನಡುವೆ ಹೊಡೆದಾಟ, ಕೊಲೆ ತೀರ ಸಾಮಾನ್ಯವೆಂಬಂತೆ ಆಗಿಬಿಟ್ಟಿದೆ. ಅದರಲ್ಲೂ ಬಿಜೆಪಿ ಮುಖಂಡರನ್ನೇ ಗುರಿಯಾಗಿಸಿ ಹಲ್ಲೆ ಮಾಡುವುದು, ಅವರನ್ನು ಹತ್ಯೆ ಮಾಡುವುದು ನಡೆಯುತ್ತಲೇ ಇರುತ್ತದೆ.
ಇದೀಗ ಹೂಗ್ಲಿ ಜಿಲ್ಲಾ ಪರಿಷತ್ನ ಬಿಜೆಪಿ ಸದಸ್ಯನೋರ್ವನ ಹತ್ಯೆ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣ ಮಾಡುವ ವಿಚಾರಕ್ಕೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಗಿ, ಅದರಲ್ಲಿ ಬಿಜೆಪಿಯ ಕಾರ್ಯಕರ್ತನೋರ್ವ ಮೃತಪಟ್ಟಿದ್ದಾನೆ. ಇದನ್ನೂ ಓದಿ: 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಭಾರತದ ಕ್ರೀಡಾಪಟುಗಳು…
ಹರೀಶ್ಚಕ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಕಾರ್ಯಕರ್ತನ ಹೆಸರು ಸುಧಾಮ್ ಪ್ರಾಮಾಣಿಕ್ ಎಂದು ಹೇಳಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಈತನ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಸುಧಾಮ್ ಅವರನ್ನು ಹತ್ಯೆ ಮಾಡಿದ್ದು ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ಎಂದು ಬಿಜೆಪಿ ಬೆಂಬಲಿಗರು ಆರೋಪ ಮಾಡಿದ್ದಾರೆ. ಆದರೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಬಿಜೆಪಿಯಲ್ಲೇ ಒಳಜಗಳ ನಡೆದು, ಅವರವರೇ ಹೊಡೆದಾಡಿಕೊಂಡಿದ್ದಾರೆ. ಆಗಲೇ ಸುಧಾಮ್ ಜೀವ ಹೋಗಿದೆ ಎಂದಿದ್ದಾರೆ.
ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
Comments are closed.