ರಾಷ್ಟ್ರೀಯ

1.10 ಕೋಟಿ ಹಣದೊಂದಿಗೆ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್

Pinterest LinkedIn Tumblr


ಹೈದರಾಬಾದ್: ತಹಶೀಲ್ದಾರ್ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಗೆ (ಎಸಿಬಿ) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಕೀಸರದ ತಹಶೀಲ್ದಾರ್ ಎರ್ವಾ ಬಲರಾಜು ನಾಗರಾಜು ಎಸಿಬಿ ಬಲೆಗೆ ಬಿದ್ದಿದ್ದಾನೆ. ಇವನು ಬರೋಬ್ಬರಿ 1.10 ಕೋಟಿಗಿಂತ ಹೆಚ್ಚು ಹಣವನ್ನು ಲಂಚವಾಗಿ ಪಡೆದುಕೊಳ್ಳುತ್ತಿದ್ದನು. ಆದರೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

ಎಎಸ್ ರಾವ್ ನಗರದ ತಹಶೀಲ್ದಾರ್ ನಿವಾಸದಲ್ಲಿ ದಾಳಿ ಮಾಡಲಾಗಿದೆ. ಆಗ ಬರೋಬ್ಬರಿ 1.10 ಕೋಟಿ ನಗದು ಹಣ ಪತ್ತೆಯಾಗಿದೆ. ಆದರೆ ತಹಶೀಲ್ದಾರ್ ಹೆಚ್ಚಾಗಿ 500 ರೂ. ಮುಖಬೆಲೆಯ ನೋಟುಗಳನ್ನು ಲಂಚವಾಗಿ ಸ್ವೀಕರಿಸಿದ್ದನು. ಹೀಗಾಗಿ ಶುಕ್ರವಾರ ರಾತ್ರಿ ನೋಟುಗಳ ಎಣಿಕೆ ಶುರುವಾಗಿದ್ದು, ಇಂದು ಬೆಳಗ್ಗೆ ತನಕ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಂಪಲ್ಲಿ ದಯಾರದಲ್ಲಿ 28 ಎಕರೆ ಜಮೀನಿನ ವಿವಾದ ಇತ್ತು. ಇದನ್ನು ಅಧಿಕೃತ ಶ್ರೀ ಸತ್ಯ ಡೆವಲಪರ್ ಚೌಲಾ ಶ್ರೀನಾಥ್ ಪರವಾಗಿ ಕೆಲಸ ಮಾಡಿದ್ದಕ್ಕಾಗಿ ಈ ಹಣವನ್ನು ತಹಶೀಲ್ದಾರ್ ಲಂಚವಾಗಿ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ ಚೌಲಾ ಶ್ರೀನಾಥ್, ತಹಶೀಲ್ದಾರ್ ನಾಗರಾಜು ಮತ್ತು ಲ್ಯಾಂಡ್ ಬ್ರೋಕರ್ ಕೆ.ಅಂಜಿ ರೆಡ್ಡಿಯನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಾಗರಾಜು ನಿವಾಸದ ಹೊರತಾಗಿ ಆತನ ಕಚೇರಿ ಆವರಣದಲ್ಲಿಯೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕಂದಾಯ ಅಧಿಕಾರಿ ಬಿ.ಸೈರಾಜ್‍ರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.