ಭೋಪಾಲ್: ಸರ್ಕಾರಿ ನೌಕರರು ಇನ್ನು ಮುಂದೆ ಟಿ-ಶರ್ಟ್ಸ್ ಹಾಗೂ ಹರಿದ ಮತ್ತು ಅಲ್ಲಲ್ಲಿ ಮಾಸಿದ ಡಿಸೈನ್ ಇರುವ ಜೀನ್ಸ್ ಪ್ಯಾಂಟ್ ಅನ್ನು ಧರಿಸುವಂತಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಸುತ್ತೋಲೆ ಹೊರಡಿಸಿದೆ.
ಹೀಗಾಗಿ ರಾಜ್ಯದ ಗ್ವಾಲಿಯರ್ ಡಿವಿಜನ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇನ್ಮುಂದೆ ಟಿ-ಶರ್ಟ್ಸ್, ಜೀನ್ಸ್ ಪ್ಯಾಂಟ್ ಧರಿಸುವುದನ್ನು ಬ್ಯಾನ್ ಮಾಡಿದೆ. ದಿವಿಜನಲ್ ಕಮಿಷನರ್ ಎಂ.ಬಿ. ಒಜಾ ಅವರು ಹೊರಡಿಸಿರುವ ಸುತ್ತೋಲೆ ಪ್ರಕಾರ ನೌಕರರು ಕಚೇರಿಯ ಅವಧಿಯಲ್ಲಿ ಘನತೆ, ಗೌರವ ಹಾಗೂ ಸಭ್ಯತೆಗೆ ತಕ್ಕ ಫಾರ್ಮಲ್ ಉಡುಪುಗಳನ್ನೇ ಧರಿಸಬೇಕೆಂದು ಹೇಳಿದೆ.
ಜುಲೈ 20ರಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕರೆದಿದ್ದ ಸಭೆಯಲ್ಲಿ ಮಂದ್ಸೂರ್ ಜಿಲ್ಲೆಯ ಅಧಿಕಾರಿಯೊಬ್ಬ ಟಿ-ಶರ್ಟ್ಸ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದು, ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟನೆಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಬಲವಾಗಿ ಖಂಡಿಸಿದ್ದು, ಎಲ್ಲ ಜಿಲ್ಲೆಯ ಅಧಿಕಾರಿಗಳು ಹಾಗೂ ನೌಕರರು ಫಾರ್ಮಲ್ ಉಡುಪಿನಲ್ಲಿಯೇ ಕಚೇರಿಗೆ ಬರಬೇಕೆಂದು ನಿರ್ದೇಶಿಸಿರುವುದಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ.
ಸರ್ಕಾರಿ ನೌಕರರು ಈ ಆದೇಶವನ್ನು ತಿರಸ್ಕರಿಸಿದ್ದಲ್ಲಿ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಲಾಗಿದೆ. ಅನೇಕ ರಾಜ್ಯಗಳು ಸಹ ಈಗಾಗಲೇ ಇದೇ ಹಾದಿಯನ್ನು ತುಳಿದಿವೆ. ಕಳೆದ ವರ್ಷ ಬಿಹಾರ ಸರ್ಕಾರ ಸಹ ಇದೇ ರೀತಿಯ ಸುತ್ತೋಲೆಯನ್ನು ಹೊರಡಿಸಿತ್ತು. ತಮಿಳುನಾಡು ಸಹ ಜಾರಿಗೆ ತಂದಿದೆ.
Comments are closed.