ರಾಷ್ಟ್ರೀಯ

ಮದ್ಯ ಬದಲು ಸ್ಯಾನಿಟೈಸರ್ ಕುಡಿದು ಭಿಕ್ಷುಕರು ಸೇರಿ 10 ಜನ ಸಾವು

Pinterest LinkedIn Tumblr

ಅಮರಾವತಿ (ಜು. 31): ಆಲ್ಕೋಹಾಲ್ ಸಿಗಲಿಲ್ಲ ಎಂಬ ಕಾರಣಕ್ಕೆ ಸ್ಯಾನಿಟೈಸರ್ ಸೇವಿಸಿ ಮೂವರು ಭಿಕ್ಷುಕರು ಸೇರಿ ಒಟ್ಟು 10 ಜನ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡು ಮಂಡಲ ಹೆಡ್ ಕ್ವಾರ್ಟರ್ ಟೌನ್​ನ ಕೆಲವರು ಮೂರ್ನಾಲ್ಕು ದಿನಗಳಿಂದ ಸ್ಯಾನಿಟೈಸರ್ ಸೇವಿಸುತ್ತಿದ್ದರು. ಆಲ್ಕೋಹಾಲ್ ಸಿಗದ ಕಾರಣ ನೀರಿಗೆ ಮತ್ತು ಕೂಲ್​ಡ್ರಿಂಕ್ಸ್​ಗೆ ಸ್ಯಾನಿಟೈಸರ್ ಸೇರಿಸಿಕೊಂಡು ಕುಡಿಯುತ್ತಿದ್ದರು. ಸ್ಯಾನಿಟೈಸರ್​ನಲ್ಲಿ ಆಲ್ಕೋಹಾಲ್ ಅಂಶ ಇರುವುದರಿಂದ ಈ ರೀತಿ ಮಿಕ್ಸ್​ ಮಾಡಿಕೊಂಡು ಕುಡಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ಕೆಲವು ದಿನಗಳಿಂದ ಅಸಹಕ ರೀತಿಯಲ್ಲಿ ಜನರು ಸಾಯುತ್ತಿದ್ದರು. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ಇಂದು ಬೆಳಿಗ್ಗೆ ಮತ್ತೆ 7 ಜನರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ನಿನ್ನೆ ರಾತ್ರಿ ಕುರಿಚೇಡು ಪೊಲೇರಮ್ಮ ದೇವಾಲಯದ ಬಳಿ ಇದ್ದ ಭಿಕ್ಷುಕ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದ. ಅದೇ ಏರಿಯಾದ ಮತ್ತೋರ್ವ ಭಿಕ್ಷುಕ ಕೂಡ ಇದೇ ರೀತಿ ಕುಸಿದುಬಿದ್ದಿದ್ದ. ಸುತ್ತಮುತ್ತಲಿನವರು ಆತನನ್ನು ಆ್ಯಂಬುಲೆನ್ಸ್​ನಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೋಡಿದರೂ ದಾರಿಯಲ್ಲೇ ಸಾವನ್ನಪ್ಪಿದ್ದ.

ಅಲ್ಲದೆ, ಕುರಿಚೇಡಿನ 7 ಜನರು ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಕುರಿಚೇಡು ಗ್ರಾಮ ಕಂಟೇನ್​ಮೆಂಟ್​ ಜೋನ್ ಆಗಿರುವುದರಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಹೀಗಾಗಿ, ಮದ್ಯಪ್ರಿಯರು ಸ್ಯಾನಿಟೈಸರ್ ಅನ್ನು ನೀರು ಹಾಗೂ ಕೂಲ್​ಡ್ರಿಂಕ್ಸ್​ ಜೊತೆ ಮಿಕ್ಸ್​ ಮಾಡಿಕೊಂಡು ಕುಡಿದಿದ್ದರು. ಈ ಘಟನೆ ನಡೆದ ಸ್ಥಳದಲ್ಲಿ ಸ್ಯಾನಿಟೈಸರ್ ಬಾಟಲಿಗಳು ಕೂಡ ಪತ್ತೆಯಾಗಿವೆ.

Comments are closed.