ರಾಷ್ಟ್ರೀಯ

ಬಾಲಕಿಯರ ಮೇಲೆ 2 ತಿಂಗಳಿಂದ ನಿರಂತರ ಅತ್ಯಾಚಾರ: ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್​ಮೇಲ್​

Pinterest LinkedIn Tumblr

ರಾಯ್ಪುರ: ಛತ್ತೀಸ್​ಗಢದ ಬಲೊಡಾ ಬಜಾರ್​ ಜಿಲ್ಲೆಯ ಪಲಾರಿ ಗ್ರಾಮದಲ್ಲಿ ತಮ್ಮ ಬಾಯ್​ಫ್ರೆಂಡ್​ಗಳ ಜತೆ ನೈಟ್​ ಔಟ್​ಗೆ ತೆರಳಿದ್ದ 14 ಮತ್ತು 16 ವರ್ಷದ ಬಾಲಕಿಯರನ್ನು ಬ್ಲ್ಯಾಕ್​ಮೇಲ್​ ಮಾಡಿದ ಯುವಕರು ಅಂದಾಜು ಎರಡು ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಮೇ 31ರ ರಾತ್ರಿ 11.30ರಲ್ಲಿ ಇಬ್ಬರು ಬಾಲಕಿಯರು ಮನೆಯವರಿಗೆ ಗೊತ್ತಾಗದ ಹಾಗೆ ತಮ್ಮಿಬ್ಬರು ಬಾಯ್​ಫ್ರೆಂಡ್​ಗಳ ಜತೆ ನೈಟ್​ ಔಟ್​ಗೆ ಬೈಕ್​ನಲ್ಲಿ ತೆರಳಿದ್ದರು. ಇದು ಬಾಲಕಿಯರ ಸಹೋದರ ಸಂಬಂಧಿಯೊಬ್ಬನ ಕಣ್ಣಿಗೆ ಬಿದ್ದಿತ್ತು. ತಕ್ಷಣವೇ ತನ್ನ ಸ್ನೇಹಿತರ ಗುಂಪಿನೊಂದಿಗೆ ಗ್ರಾಮದ ನಿರ್ಜನ ಪ್ರದೇಶಕ್ಕೆ ತೆರಳಿ, ಬಾಲಕಿಯರು ವಾಪಸು ಬರುವುದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದ.

ತಡರಾತ್ರಿ 2 ಗಂಟೆಯಲ್ಲಿ ಬಾಲಕಿಯರು ತಮ್ಮ ಬಾಯ್​ಫ್ರೆಂಡ್​ಗಳ ಜತೆ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಅವರನ್ನು ತಡೆದ ಸಹೋದರ ಸಂಬಂಧಿ ಮತ್ತು ಆತನ ಸ್ನೇಹಿತರ ಗುಂಪು, ಯುವಕರ ಮೇಲೆ ಹಲ್ಲೆ ಮಾಡಿ ಅವರನ್ನು ಓಡಿಸಿತ್ತು. ಬಳಿಕ ಇಬ್ಬರು ಬಾಲಕಿಯರನ್ನು ಹತ್ತಿರದ ಪೊದೆಗೆ ಎಳೆದೊಯ್ದು ಅಂದಾಜು 2 ಗಂಟೆ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ತಮ್ಮ ಕೃತ್ಯವನ್ನು ಮೊಬೈಲ್​ಫೋನ್​ನಲ್ಲಿ ಚಿತ್ರೀಕರಿಸಿಕೊಂಡಿದ್ದರು.

ಆನಂತರದಲ್ಲಿ ಪ್ರತಿದಿನವೂ ಬಾಲಕಿಯರಿಗೆ ಕರೆ ಮಾಡುತ್ತಿದ್ದ ಸಹೋದರ ಸಂಬಂಧಿ, ತನ್ನನ್ನು ಮತ್ತು ತನ್ನ ಸ್ನೇಹಿತರನ್ನು ಭೇಟಿಯಾಗಿ ಕಾಮತೃಷೆ ಇಂಗಿಸದಿದ್ದರೆ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಹೆದರುತ್ತಿದ್ದ ಸಹೋದರಿಯರು ಅವರ ಕರೆದಾಗಲೆಲ್ಲ ಹೋಗ ಸಹೋದರ ಸಂಬಂಧಿ ಮತ್ತು ಆತನ ಸ್ನೇಹಿತರ ಕಾಮತೃಷೆ ಇಂಗಿಸಿ ಬರುತ್ತಿದ್ದರು.

ಆದರೆ, ಜು.29ರಂದು ಅಪರಿಚಿತ ವ್ಯಕ್ತಿಯೊಬ್ಬ ಸಹೋದರಿಯರಿಗೆ ಕರೆ ಮಾಡಿ, ಅತ್ಯಾಚಾರದ ದೃಶ್ಯಗಳು ನನ್ನ ಬಳಿ ಇವೆ. ನೀವು ಬಂದು ನನ್ನೊಂದಿಗೆ ಸಹಕರಿಸದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಇದರಿಂದ ಬೆದರಿದ ಯುವತಿಯರು ಮಹಿಳಾ ಸಹಾಯವಾಣಿಗೆ ಕರೆಮಾಡಿ ನಡೆದ ವಿಷಯವನ್ನು ಹೇಳಿಕೊಂಡು ಸಹಾಯಕ್ಕಾಗಿ ಮೊರೆಯಿಟ್ಟಿದ್ದರು. ಇದೀಗ ಬಾಲಕಿಯರ ಸಹೋದರ ಸಂಬಂಧಿ ಸೇರಿ 8 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.