ರಾಷ್ಟ್ರೀಯ

ಜಿಲ್ಲಾ ನ್ಯಾಯಾಧೀಶರ ಕುಟುಂಬಕ್ಕೆ ವಿಷಪ್ರಾಶನ ಮಾಡಿದಳಾ ಮಹಿಳೆ!

Pinterest LinkedIn Tumblr


ಭೋಪಾಲ/ಬೇತುಲ್​: ಹಣ ಹೂಡಿಕೆ ವಿಚಾರಕ್ಕೆ ಮನಸ್ತಾಪ ಏರ್ಪಟ್ಟ ಕಾರಣ ಮಹಿಳೆಯೊಬ್ಬಳು ಜಿಲ್ಲಾ ನ್ಯಾಯಾಧೀಶರೊಬ್ಬರ ಕುಟುಂಬಕ್ಕೆ ವಿಷಪ್ರಾಶನ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಜಡ್ಜ್ ಮತ್ತು ಅವರ ಪುತ್ರ ಮೃತರಾಗಿದ್ದು, ಇನ್ನೊಬ್ಬ ಪುತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮಹಿಳೆ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು ಛಿಂದ್ವಾರಾದ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಮಹೇಂದ್ರ ತ್ರಿಪಾಠಿ(56), ಅವರ ಪುತ್ರ ಅಭ್ಯಂಜರಾಜ್​ ತ್ರಿಪಾಠಿ(33) ಎಂದು ಗುರುತಿಸಲಾಗಿದೆ. ಇನ್ನೋರ್ವ ಪುತ್ರ ಆಶೀಶ್ ರಾಜ್​(25) ಆರೋಗ್ಯ ಸ್ಥಿತಿ ಸುಧಾರಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮಹೇಂದ್ರ ತ್ರಿಪಾಠಿ ಮತ್ತು ಎನ್​ಜಿಒ ನಡೆಸುತ್ತಿದ್ದ ಸಂಧ್ಯಾ ಸಿಂಗ್(45) ಮಧ್ಯೆ ಸ್ನೇಹವಿತ್ತು. ತ್ರಿಪಾಠಿ ಜಡ್ಜ್ ಆಗುವುದಕ್ಕಿಂತ ಮೊದಲಿನ ಪರಿಚಯವದು. ಅವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ನಾಲ್ಕು ತಿಂಗಳ ಹಿಂದೆ ಮಹೇಂದ್ರ ಅವರ ಕುಟುಂಬವೂ ಬೆತುಲ್ ನಗರಕ್ಕೆ ಬಂದು ವಾಸಿಸಲಾರಂಭಿಸಿದೆ. ಆಗಿನಿಂದ ಮಹೇಂದ್ರ ಅವರನ್ನು ಭೇಟಿ ಮಾಡಲು ಸಂಧ್ಯಾಗೆ ಸಾಧ್ಯವಾಗಿಲ್ಲ. ಹೂಡಿಕೆ ಸಂಬಂಧ ಏರ್ಪಟ್ಟಿರುವ ಮನಸ್ತಾಪ ಬಗೆಹರಿದಿರಲಿಲ್ಲ. ಅದೇ ಸಿಟ್ಟಿನಿಂದ ತ್ರಿಪಾಠಿ ಕುಟುಂಬವನ್ನೇ ನಾಶಮಾಡುವ ನಿರ್ಧಾರವನ್ನು ಸಂಧ್ಯಾ ತೆಗೆದುಕೊಂಡಿದ್ದಳು.

ಜುಲೈ 20ರಂದು ಮನೆಯಲ್ಲಿ ಪೂಜೆಯೆಂದು ಕರೆದು, ಮಹೇಂದ್ರಗೆ ಗೋಧಿ ಹಿಟ್ಟನ್ನು ಸಂಧ್ಯಾ ಕೊಟ್ಟಿದ್ದಾರೆ. ಅದೇ ದಿನ ರಾತ್ರಿ ಆ ಹಿಟ್ಟಿನಲ್ಲಿ ಚಪಾತಿ ಮಾಡಿ ಮಹೇಂದ್ರ, ಮತ್ತವರ ಇಬ್ಬರು ಮಕ್ಕಳು ತಿಂದಿದ್ದಾರೆ. ಅದಾದ ನಂತರ ಕೆಲವೇ ಹೊತ್ತಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೂಡಲೇ ಔಷಧೋಪಚಾರ ಮಾಡಲಾಗಿದೆ. ಮಹೇಂದ್ರ ಅವರ ಪತ್ನಿ ಭಾಗ್ಯ ಆ ದಿನ ಆಹಾರ ಸೇವಿಸಿರಲಿಲ್ಲ. ಹಾಗಾಗಿ ಅವರು ಅನಾರೋಗ್ಯಕ್ಕೆ ಈಡಾಗಲಿಲ್ಲ. ಎರಡು ದಿನಗಳ ನಂತರವೂ ಆರೋಗ್ಯ ಸುಧಾರಿಸದ ಕಾರಣ ಮೂವರನ್ನು ಜುಲೈ 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜುಲೈ 25ರಂದು ಮಹೇಂದ್ರರ ಹಿರಿಯ ಮಗ ಮತ್ತು ಜುಲೈ 26ರಂದು ಮಹೇಂದ್ರ ಸಾವನ್ನಪ್ಪಿದ್ದಾರೆ.

ಆಶೀಶ್​ರಾಜ್ ಪೊಲೀಸ್ ವಿಚಾರಣೆ ವೇಳೆ ಸಂಧ್ಯಾ ಸಿಂಗ್ ಗೋಧಿ ಹುಡಿ ಕೊಟ್ಟ ವಿಚಾರ ತಿಳಿಸಿದ್ದರು. ಅಲ್ಲದೆ, ಆ ಗೋಧಿ ಹುಡಿಯಲ್ಲಿ ಸಂಧ್ಯಾ ಏನೋ ಮಿಕ್ಸ್ ಮಾಡಿದ್ದಾಳೆ ಎಂದು ಹೇಳಿದ್ದಾಗಿ ತಿಳಿಸಿದ್ದರು. ಈ ಸುಳಿವಿನ ಮೇರೆಗೆ ಪೊಲೀಸರು ಆರೋಪಿ ಸಂಧ್ಯಾ, ಅವರ ಡ್ರೈವರ್ ಸಂಜು ಮತ್ತು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ವಿಷುಯ ಬಹಿರಂಗವಾಗಿದೆ.

Comments are closed.