ರಾಷ್ಟ್ರೀಯ

ಪರೀಕ್ಷೆಯೇ ಮಾಡದೆ ಕರೊನಾ ಪತ್ತೆ ಮಾಡಬಹುದು

Pinterest LinkedIn Tumblr


ನವದೆಹಲಿ: ವಿಶ್ವಮಾರಿಯಾಗಿ ವ್ಯಾಪಿಸಿರುವ ಕೋವಿಡ್​-19 ಪಿಡುಗಿನ ಕುರಿತು ಪ್ರಪಂಚದೆಲ್ಲೆಡೆ ಚರ್ಚೆಗಳು ಕೇಂದ್ರೀಕೃತವಾಗುತ್ತಿವೆ. ಕರೊನಾ ವೈರಾಣು ಸೋಂಕು ತಗುಲಿರುವುದನ್ನು ಖಚಿತಪಡಿಸಿಕೊಳ್ಳಲು ಗಂಟಲದ್ರವ ಪರೀಕ್ಷೆ, ಮೂಗಿನ ಹೊಳ್ಳೆ ಮೂಲಕ ಹತ್ತಿಯನ್ನು ಒಳಗಿಟ್ಟು ಗೊಣ್ಣೆಯ ಮಾದರಿಯ ಸಂಗ್ರಹ ಸೇರಿ ನಾನಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಅಲ್ಲದೆ, ಈ ಪರೀಕ್ಷೆಗಳನ್ನು ಮಾಡಲು ದಬಾರಿ ಶುಲ್ಕವನ್ನೂ ವಸೂಲಿ ಮಾಡಲಾಗುತ್ತಿದೆ. ಆದರೆ, ಒಂದು ರೂಪಾಯಿ ಖರ್ಚು ಮಾಡದೆ, ವ್ಯಕ್ತಿಗೆ ಕರೊನಾ ಸೋಂಕು ತಗುಲಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಅದು ಹೇಗೆ? ಹೇಗೆ ಎಂದರೆ ಮನುಷ್ಯನ ಅತ್ಯಂತ ಪ್ರೀತಿಪಾತ್ರ ಸಾಕು ಪ್ರಾಣಿ ನಾಯಿಗಳ ಮೂಲಕ ಸೋಂಕನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂಬುದು ವಿಜ್ಞಾನಿಗಳ ಮಾತಾಗಿದೆ. ಇದಕ್ಕಾಗಿ ನಾಯಿಗೆ ಸ್ವಲ್ಪ ತರಬೇತಿ ಕೊಟ್ಟರೆ ಸಾಕು ಎಂದು ಅವರು ಹೇಳುತ್ತಾರೆ.

ತರಬೇತಿ ಕೊಟ್ಟ ನಾಯಿಗಳನ್ನು ಬಳಸಿ ವಿಮಾನ ನಿಲ್ದಾಣ ಮತ್ತು ಕ್ರೀಡಾಕೂಟಗಳು ಸೇರಿ ಜನರು ಹೆಚ್ಚಾಗಿ ಸೇರುವ ಸಂದರ್ಭದಲ್ಲಿ ತುಂಬಾ ಸುಲಭವಾಗಿ ಕರೊನಾವೈರಾಣು ಸೋಂಕಿತರನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ತಿಳಿಸುತ್ತಾರೆ.

ವಿಜ್ಞಾನಿಗಳು ಇಷ್ಟು ಹೇಳಿದ್ದೇ ತಡ. ಜರ್ಮನಿಯ ಸೇನಾಪಡೆ ಯೋಧರು ಒಂದು ವಾರದ ಅವಧಿಯಲ್ಲಿ ತಮ್ಮ ಶ್ವಾನಪಡೆಯ ಎಂಟು ನಾಯಿಗಳಿಗೆ ಕರೊನಾವೈರಾಣು ಸೋಂಕು ಪತ್ತೆ ಮಾಡುವ ತರಬೇತಿಯನ್ನು ಕೊಟ್ಟಿದ್ದಾರೆ. ಇವರಿಂದ ತರಬೇತಿ ಪಡೆದ ನಾಯಿಗಳು ತುಂಬಾ ಸುಲಭವಾಗಿ ಮಾನವರಿಗೆ ತಗುಲಿರುವ ಸಾರ್ಸ್​-ಕೋವ್​-2 ವೈರಾಣು ಸೋಂಕನ್ನು ಪತ್ತೆ ಮಾಡಿವೆಯಂತೆ. ಬ್ರಿಟನ್​ನಲ್ಲಿ ಕೂಡ ಇಂಥ ನಾಯಿಗಳಿಗೆ ತರಬೇತಿ ಕೊಟ್ಟು ಕೋವಿಡ್​ ಸೋಂಕಿತರನ್ನು ಪತ್ತೆ ಮಾಡುವ ಪ್ರಯೋಗಗಳು ಆರಂಭವಾಗಿರುವುದಾಗಿ ಹೇಳಲಾಗಿದೆ.

ಹೇಗೆ ಪತ್ತೆ ಮಾಡುತ್ತವೆ?: ಶ್ವಾನಪಡೆಯ ನಾಯಿಗಳಿಗೆ ಒಂದು ವಾರದ ಅವಧಿಯಲ್ಲಿ ಹಲವರ ಎಂಜಲನ್ನು ಮೂಸುವ ತರಬೇತಿ ನೀಡಲಾಯಿತು. ಬಳಿಕ ಕೋವಿಡ್​-19 ಸೋಂಕಿತ 1,012 ಜನರು ಮತ್ತು ಸೋಂಕು ಇಲ್ಲದ 1,012 ಜನರ ಎಂಜಲನ್ನು ಮೂಸುವಂತೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಅವು ಶೇ.94 ನಿಖರತೆಯೊಂದಿಗೆ ಕೋವಿಡ್​-19 ಸೋಂಕಿತರು ಮತ್ತು ಸೋಂಕು ಇಲ್ಲದವರನ್ನು ಪತ್ತೆ ಮಾಡಿದ್ದಾಗಿ ವಿಜ್ಞಾನಿಗಳು ತಿಳಿಸುತ್ತಾರೆ.

ತರಬೇತಿ ಪಡೆದ ನಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತು ಸೋಂಕಿಗೆ ತುತ್ತಾಗಿರುವ ಕರೊನಾ ಸೋಂಕಿತರ ಉಸಿರಿನಲ್ಲಿರುವ ಅಂಶಗಳನ್ನು ಆಧರಿಸಿ ನಿಖರವಾಗಿ ಸೋಂಕಿತರು ಮತ್ತು ಸೋಂಕಿತರಲ್ಲದವರನ್ನು ಗುರುತಿಸುತ್ತವೆ ಎಂದು ವಿವರಿಸುತ್ತಾರೆ.

ಕೋವಿಡ್​-19 ಸೋಂಕಿತರಲ್ಲಿನ ಆಹಾರ ಪಚನಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ. ಈ ಸೂಕ್ಷ್ಮಾತಿಸೂಕ್ಷ್ಮ ಬದಲಾವಣೆಯ ವಾಸನೆಯನ್ನು ಗ್ರಹಿಸುವ ಮೂಲಕ ನಾಯಿಗಳು ಸೋಂಕಿತರು ಮತ್ತು ಸೋಂಕು ಇಲ್ಲದವರನ್ನು ಪತ್ತೆ ಮಾಡುತ್ತವೆ ಎಂದು ವಿಜ್ಞಾನಿ ಪ್ರೊ. ಡಾ. ಮರೇನ್​ ವಾನ್​ ಕಾಕ್ರಿಟ್ಜ್​ ಬ್ಲಿಕ್​ವೇಡ್​ ಹೇಳುತ್ತಾರೆ.

ಕೋವಿಡ್​-19 ಪತ್ತೆ ಮಾಡುವ ಕುರಿತು ನಾಯಿಗಳಿಗೆ ತರಬೇತಿ ಕೊಡುವ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ, ಇನ್​ಫ್ಲುಯೆನ್ಜಾ ಸೇರಿ ವಿವಿಧ ರೋಗಗಳ ಪತ್ತೆಗಾಗಿ ನಾಯಿಗಳಿಗೆ ತರಬೇತಿ ನೀಡಲು ಆರಂಭಿಸಲಾಗಿದೆ ಎಂದು ಅವರು ತಿಳಿಸುತ್ತಾರೆ.

Comments are closed.