ರಾಷ್ಟ್ರೀಯ

ಕೊರೋನಾ ಲಸಿಕೆಗಾಗಿ 30 ಬಾರಿ ಪ್ರಯೋಗದಲ್ಲಿ 20ರಲ್ಲಿ ಮುನ್ನಡೆ: ಭಾರತೀಯ ತಜ್ಞರು

Pinterest LinkedIn Tumblr


ಬೆಂಗಳೂರು: ಮಾರಕ ಕೊರೋನಾ ವೈರಸ್ ಗಾಗಿ ಲಸಿಕೆ ಕಂಡು ಹಿಡಿಯುವ ಕಾರ್ಯ ಭರದಿಂದ ಸಾಗಿದ್ದು, ದೇಶದಲ್ಲಿ ವಿವಿಧ ಕಂಪನಿಗಳು ಲಸಿಕೆಯ ಪ್ರಯೋಗ ನಡೆಸಿದ್ದು, ಒಟ್ಟಾರೆ 30 ಬಾರಿ ಪ್ರಯೋಗಗಳಲ್ಲಿ 20 ಬಾರಿ ಲಸಿಕೆಯಲ್ಲಿ ಮಹತ್ತರ ಮುನ್ನಡೆ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಹೌದು.. ಜಗತ್ತಿನ 213ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಭರದಿಂದ ಸಾಗಿದೆ. ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿದ್ದು, ಈ ರೇಸ್ ನಲ್ಲಿ ಭಾರತ ಕೂಡ ಪ್ರಧಾನ ಪಟ್ಟಿಯಲ್ಲಿದೆ. ಭಾರತದಲ್ಲಿ ಈ ವರೆಗೂ ಕೊರೋನಾ ವೈರಸ್ ಗೆ ಸಂಬಂಧಿಸಿದ ಲಸಿಕೆ ತಯಾರಿಕೆಯಲ್ಲಿ ವಿವಿಧ ಸಂಸ್ಥೆಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ದೇಶದಲ್ಲಿ ಈ ವರೆಗೂ ಲಸಿಕೆಯ ಮೇಲೆ 30 ಬಾರಿ ಪ್ರಯೋಗ ನಡೆಸಲಾಗಿದೆ. ಈ ಪೈಕಿ 20 ಪ್ರಯೋಗಗಳಲ್ಲಿ ಮಹತ್ವದ ಮುನ್ನಡೆ ಕಂಡುಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ ವಿಜಯ್ ರಾಘವನ್ ಅವರು ಮಾಹಿತಿ ನೀಡಿದ್ದು, ಸೈನರ್ಜಿಯಾ ಫೌಂಡೇಷನ್ ಸಂಸ್ಥೆ ಆಯೋಜಿಸಿದ್ದ ವರ್ಚುವಲ್ ಫೋರಂ ನಲ್ಲಿ ಪಾಲ್ಗೊಂಡು ಮಾತನಾಡಿದರು.

‘ದೇಶದ ದೊಡ್ಡ ದೊಡ್ಡ ಔಷಧ ತಯಾರಿಕಾ ಸಂಸ್ಥೆಗಳು ಲಸಿಕೆ ಸಂಶೋಧನೆ ಮತ್ತು ಅದರ ತಯಾರಿಕೆಯಲ್ಲಿ ತೊಡಗಿವೆ. ದೊಡ್ಡ ಸಂಸ್ಥೆಗಳು ಮಾತ್ರವಲ್ಲದೇ ದೇಶದ ಪುಟ್ಟ ಪುಟ್ಟ ಔಷಧ ತಯಾರಿಕಾ ಸಂಸ್ಥೆಗಳೂ ಕೂಡ ಲಸಿಕೆ ತಯಾರಿಕೆಯ ತೊಡಗಿರುವು ಗಮನಾರ್ಹ ಸಂಗತಿಯಾಗಿದೆ. ಕೇವಲ ಔಷಧ ತಯಾರಿಕಾ ಸಂಸ್ಥೆಗಳು ಮಾತ್ರವಲ್ಲದೇ ಸ್ಟಾರ್ಟಪ್ ಗಳು, ಅಕಾಡೆಮಿಕ್ ಲ್ಯಾಬ್ ಗಳಲ್ಲೂ ಲಸಿಕೆಗಾಗಿ ಸಂಶೋಧನೆ ಮುಂದುವರೆದಿದೆ. ಕೇವಲ ಒಂದು ಲಸಿಕೆಯಿಂದ ಮಾತ್ರವೇ ಕೊರೋನಾ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆವಿಷ್ಕಾರ ಆಗುವ ಪ್ರತೀ ಲಸಿಕೆಗಳು ಒಂದಕ್ಕಿಂತ ಒಂದು ಭಿನ್ನ ಮತ್ತು ಪರಿಣಾಮಕಾರಿಯಾಗಿರಬೇಕು. ಇದು ಲಸಿಕೆ ತಯಾರಿಕರಿಗೆ ದೊಡ್ಡ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ಕಂಪನಿಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಲಸಿಕೆಗಳ ದೊಡ್ಡ ಮಟ್ಟದ ತಯಾರಿಕೆ ಮತ್ತು ಸರಬರಾಜು ಮಾಡುವ ವಿಭಾಗದಲ್ಲಿ ಭಾರತ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಜಗತ್ತಿನಲ್ಲೇ ಭಾರತ ಅತೀ ದೊಡ್ಡ ಲಸಿಕೆ ತಯಾರಕ ದೇಶವಾಗಿದೆ. ಜಗತ್ತಿನ ಪ್ರತೀ ಮೂರು ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕೆಗಳ ಪೈಕಿ ಇಬ್ಬರು ಮಕ್ಕಳಿಗೆ ನೀಡಲಾಗುವ ಲಸಿಕೆ ಭಾರತದಲ್ಲಿ ತಯಾರಿಸಿದ್ದೇ ಆಗಿದೆ ಎಂದು ಹೇಳಿದರು.

ಇದೇ ವೇಳೆ ಕೋವಿಡ್-19 ಲಸಿಕೆ ತಯಾರಿಕೆಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ತರವಾದದ್ದು ಎಂದು ರಾಘವನ್ ಅವರು, ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಎಲ್ಲ ತಯಾರಕರೂ ಒಗ್ಗೂಡಿ ವೆಂಟಿಲೇಟರ್‌ಗಳು, ಆಮ್ಲಜನಕ-ಪೂರೈಕೆ ಸಾಧನಗಳು, ಸೋಂಕು ಸಂಪರ್ಕ-ಪತ್ತೆ ಹಚ್ಚುವ ಅಪ್ಲಿಕೇಶನ್‌ಗಳು, ಸಾರ್ವಜನಿಕ ಮುಕ್ತ ಮೂಲಕ ಔಷಧಿಗಳ ಆವಿಷ್ಕಾರ, ವಿನ್ಯಾಸ ಮತ್ತು ಅಭಿವೃದ್ಧಿ ಹೊರಬರುತ್ತಿವೆ ಎಂದು ಹೇಳಿದರು. ಅಂತೆಯೇ ಕೊರೋನಾ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಹವಾಮಾನ ಬದಲಾವಣೆ, ಪರಿಸರ ಮತ್ತು ಪರಿಸರ ವಿಜ್ಞಾನದ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯವನ್ನು ರಾಘವನ್ ಅವರು ಒತ್ತಿ ಹೇಳಿದರು.

Comments are closed.