ರಾಷ್ಟ್ರೀಯ

ಹೈಟೆಕ್ ಸೆಕ್ಸ್​ ದಂಧೆಯ ಕಿಂಗ್​ಪಿನ್ ದೇಶದಲ್ಲಿ ಪ್ರಸಿದ್ಧಿ ಪಡೆದಿದ್ದ ಸೋನುಗೆ 24 ವರ್ಷ ಜೈಲು

Pinterest LinkedIn Tumblr


ನವದೆಹಲಿ (ಜು. 24): ಆ ಸುಂದರಿಯ ಹೆಸರು ಗೀತಾ ಅರೋರ. ನೋಡಲು ಎಷ್ಟು ಸುಂದರಿಯೋ ಆಕೆಯ ಹಿನ್ನೆಲೆ ಅಷ್ಟೇ ಭಯಾನಕವಾಗಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತನ್ನು ನಿಜಗೊಳಿಸಲೆಂದೇ ಆಕೆ ಜನ್ಮ ತಳೆದಿದ್ದಾಳೇನೋ ಎಂದು ಅನುಮಾನ ಬರುವಂತೆ ಜೀವಿಸಿದ ಆಕೆ ನಂತರ ತನ್ನ ಹೆಸರನ್ನು ಸೋನು ಪಂಜಬನ್ ಎಂದು ಬದಲಾಯಿಸಿಕೊಂಡಳು. ಸದ್ಯಕ್ಕೆ ಈ ಹೆಸರು ಇಡೀ ದೇಶದಲ್ಲಿ ಈ ಪ್ರಸಿದ್ಧಿ ಪಡೆದಿದೆ. ಅದಕ್ಕೆ ಕಾರಣ ಆಕೆ ಮಾಡುತ್ತಿದ್ದ ಸೆಕ್ಸ್​ ದಂಧೆ!

ಹೌದು, 12 ವರ್ಷದ ಬಾಲಕಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ, ಹಿಂಸೆ ನೀಡಿ, ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಆರೋಪಿ ಈ ಸೋನು. ಬೇರೆ ದೇಶ ಹಾಗೂ ರಾಜ್ಯಗಳಿಗೆ ಮಾನವ ಕಳ್ಳಸಾಗಾಣಿಕೆ ಮಾಡುತ್ತಿದ್ದ ಸೋನು ಅದಕ್ಕಾಗಿ ಅಮಾಯಕ ಯುವತಿಯರು, ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದಳು. ಆಕೆಗೆ ಬುಧವಾರ ದೆಹಲಿ ಹೈಕೋರ್ಟ್​ 24 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈಕೆಯ ದಂಧೆ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿತ್ತೆಂದರೆ 2013ರಲ್ಲಿ ಈಕೆಯ ಕತೆಯನ್ನು ಫುಕ್ರೆ ಎಂಬ ಬಾಲಿವುಡ್ ಸಿನಿಮಾದಲ್ಲಿಯೂ ಬಳಸಿಕೊಳ್ಳಲಾಗಿತ್ತು. ರಿಚಾ ಚಡ್ಡಾ ಈ ಸಿನಿಮಾದಲ್ಲಿ ಸೋನು ಪಾತ್ರವನ್ನು ನಿರ್ವಹಿಸಿದ್ದರು.

ಭಾರತದ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಅತಿದೊಡ್ಡ ವೇಶ್ಯಾವಾಟಿಕೆ ಜಾಲದ ಕಿಂಗ್ ಪಿನ್ ಆಗಿದ್ದಾಕೆ ಸೋನು ಪಂಜಾಬನ್. ದೆಹಲಿಯಲ್ಲಿ ಹುಟ್ಟಿದ ಈಕೆಗೆ ಈಗ ಕೇವಲ 35 ವರ್ಷ. ಆದರೆ, ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲದಂತೆ ರಂಗಿನ ಜೀವನವನ್ನು ನಡೆಸಿರುವ ಈಕೆ ಅದೆಷ್ಟೋ ಅಮಾಯಕ ಹೆಣ್ಣುಮಕ್ಕಳ ಜೀವನವನ್ನೇ ಹಾಳು ಮಾಡಿದಾಕೆ. ಹೆಣ್ಣುಮಕ್ಕಳನ್ನು ನಂಬಿಸಿ, ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಸೋನು ಅದಕ್ಕಾಗಿ ಹೈಟೆಕ್ ಜಾಲವನ್ನು ಸೃಷ್ಟಿಸಿಕೊಂಡಿದ್ದಳು. ದೊಡ್ಡ ಉದ್ಯಮಿಗಳು, ರಾಜಕಾರಣಿಗಳ ಕುಮ್ಮಕ್ಕು ಕೂಡ ಈಕೆಗಿತ್ತು. ಅಲ್ಲದೆ, ದೆಹಲಿಯ ಪ್ರತಿಷ್ಠಿತ ವ್ಯಕ್ತಿಗಳಿಗೆ ಈಕೆಯೇ ಹುಡುಗಿಯರನ್ನು ಸಪ್ಲೈ ಮಾಡುತ್ತಿದ್ದಳು.

ಯಾರು ಈ ಸೋನು ಪಂಜಾಬನ್?:
ಹರಿಯಾಣದ ಆಟೋ ಚಾಲಕನ ಮಗಳು ಈ ಸುಂದರಿ ಗೀತಾ ಅಲಿಯಾಸ್ ಸೋನು. 10ನೇ ತರಗತಿ ಓದಿದ ನಂತರ ಕೆಲಸಕ್ಕೆಂದು ದೆಹಲಿಗೆ ಬಂದ ಆಕೆ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸಕ್ಕೆ ಸೇರಿದಳು. ನಂತರ ವೇಶ್ಯಾವಾಟಿಕೆಯನ್ನು ಆರಂಭಿಸಿ, ಸೆಕ್ಸ್​ ರಾಕೆಟ್ ಎಂದೇ ಹೆಸರಾದಳು. ಇದನ್ನೇ ಬ್ಯುಸಿನೆಸ್ ಆಗಿಸಿಕೊಂಡ ಆಕೆ ಹಲವು ಬಾರಿ ಸಿಕ್ಕಿಬಿದ್ದರೂ ಗಣ್ಯ ವ್ಯಕ್ತಿಗಳಿಗೆ ಹುಡುಗಿಯರ ಸರಬರಾಜು ಮಾಡುತ್ತಿದ್ದುದರಿಂದ ಅವರ ಪ್ರಭಾವದಿಂದ ಜೈಲಿನಿಂದ ಆಚೆ ಬರುತ್ತಿದ್ದಳು.

ಚೆಂದದ ಹುಡುಗಿಯರು ಕಂಡರೆ ಅವರಿಗೆ ಸಿನಿಮಾ, ಧಾರಾವಾಹಿಯಲ್ಲಿ ಅವಕಾಶ ಕೊಡಿಸುವ ಆಮಿಷವೊಡ್ಡಿ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಸೋನು ನಂತರ ಅಮಲು ಬರುವ ಔಷಧಿ ನೀಡಿ, ಹೆದರಿಸಿ, ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಳು. ನೋಡಲು ಅಂದವಾಗಿ ಡ್ರೆಸ್ ಮಾಡಿಕೊಂಡು, ಒಳ್ಳೆಯ ಉದ್ಯೋಗದಲ್ಲಿರುವಂತೆ ಬಿಂಬಿಸಿಕೊಳ್ಳುತ್ತಿದ್ದ ಸೋನು ಮೇಲೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ನಂತರ ಅವರನ್ನು ದೆಹಲಿಯ ಪ್ರತಿಷ್ಠಿತ ವ್ಯಕ್ತಿಗಳ ಮನೆಗಳಿಗೆ, ಪಂಚತಾರಾ ಹೋಟೆಲ್​ಗಳಿಗೆ, ರೆಸಾರ್ಟ್​ಗಳಿಗೆ ಕಳುಹಿಸಿ ತನ್ನ ದಂಧೆ ನಡೆಸುತ್ತಿದ್ದಳು. ಕೊನೆಗೂ ಈಕೆ ತಾನು ಮಾಡಿದ ತಪ್ಪಿಗೆ ಕೋರ್ಟ್​ ಮುಂದೆ ತಲೆಬಾಗಿದ್ದಾಳೆ. ಆಕೆಗೆ ದೆಹಲಿ ಹೈಕೋರ್ಟ್ 24 ವರ್ಷ ಜೈಲು ಶಿಕ್ಷೆ ಹಾಗೂ 64,000 ರೂ.ಗಳ ದಂಡವನ್ನು ವಿಧಿಸಿದೆ.ಆಕೆ ಸಿಕ್ಕಿಹಾಕಿಕೊಂಡಿದ್ದು ಹೇಗೆ?:
ಅಷ್ಟಕ್ಕೂ ಇಷ್ಟೆಲ್ಲ ತಪ್ಪುಗಳನ್ನು ಮಾಡಿಯೂ ಪ್ರಭಾವೀ ವ್ಯಕ್ತಿಗಳ ಕೃಪಾಕಟಾಕ್ಷದಿಂದ ಬಚಾವಾಗುತ್ತಿದ್ದ ಸೋನು ಸಿಕ್ಕಿಹಾಕಿಕೊಂಡಿದ್ದು ಹೇಗೆ? ಎಂದು ನಿಮಗೆ ಆಶ್ಚರ್ಯವಾಗಬಹುದು. ತನ್ನ ಗೆಳೆಯ 41 ವರ್ಷದ ಸಂದೀಪ್ ಬೆಡ್ವಾಲ್ ಎಂಬಾತನ ಜೊತೆ ಸೇರಿ ಸೋನು ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದಳು. ಆಕೆಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ, ಚಿತ್ರಹಿಂಸೆ ನೀಡಿ, 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ್ದರು. 12 ವರ್ಷದ ಆಕೆಗೆ ಡ್ರಗ್ಸ್​ ನೀಡಿ, ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡಿದ್ದರು. ಹೇಗೋ ಇವರಿಂದ ತಪ್ಪಿಸಿಕೊಂಡಿದ್ದ ಆ ಬಾಲಕಿ ಪೊಲೀಸರ ಬಳಿ ಎಲ್ಲ ವಿಚಾರವನ್ನೂ ಹೇಳಿದ್ದಳು. ಆ ಬಾಲಕಿ ನೀಡಿದ್ದ ದೂರಿನ ಆಧಾರದಲ್ಲಿ ಸೋನು ಮತ್ತು ಆಕೆಯ ಗೆಳೆಯನನ್ನು ಬಂಧಿಸಲಾಗಿತ್ತು. ಈ ಒಂದು ಪ್ರಕರಣ ಬೆಳಕಿಗೆ ಬಂದಿದ್ದೇ ಬಂದಿದ್ದು ಸೋನು ಮಾಡಿದ್ದ ಎಲ್ಲ ಅಪರಾಧಗಳೂ ಒಂದೊಂದಾಗಿ ಹೊರಬರಲಾರಂಭಿಸಿವೆ.

ಅದಕ್ಕೂ ವಿಪರ್ಯಾಸವೆಂದರೆ ಸೋನು ಪಂಜಾಬನ್ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿ ಪೊಲೀಸ್ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದ. ಅದಾದ ಬಳಿಕ ಮತ್ತೊಬ್ಬ ರೌಡಿಯನ್ನು ಮದುವೆಯಾಗಿದ್ದಳು ಸೋನು. ಆದರೆ, ಆತ ಕೂಡ ಪೊಲೀಸ್ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದ. ಅದಾದ ಬಳಿಕ ಇನ್ನೋರ್ವ ರೌಡಿಯ ಜೊತೆಗೆ ಸೋನು ಸಂಬಂಧವಿಟ್ಟುಕೊಂಡಿದ್ದಳು. ಆದರೆ, ಆತ ಕೂಡ ಇತ್ತೀಚೆಗೆ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದ. ಇದಕ್ಕೂ ಮೊದಲು 2007ರಲ್ಲಿ ಕೂಡ ಮಾನವ ಕಳ್ಳಸಾಗಾಣಿಕೆಯ ಆರೋಪದಲ್ಲಿ ಈಕೆಯನ್ನು ಬಂಧಿಸಲಾಗಿತ್ತು. ಅದಾದ ಬಳಿಕವೂ ಅನೇಕ ಬಾರಿ ಪೊಲೀಸರ ಅತಿಥಿಯಾಗಿದ್ದ ಈಕೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಶಿಕ್ಷೆಗೆ ಗುರಿಯಾಗಿದ್ದಾಳೆ.

Comments are closed.