ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಸಂಪತ್ತು ಒಂದೇ ದಿನ 2.12 ಶತಕೋಟಿ ಡಾಲರ್ (ಸುಮಾರು 16,112 ಕೋಟಿ ರೂ.) ಏರಿಕೆಯಾಗಿದೆ. ಈ ಮೂಲಕ ಅವರು ವಿಶ್ವದ 5ನೇ ದೊಡ್ಡ ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೋರ್ಬ್ಸ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಸಿರಿವಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್ ಮತ್ತು ಅಮೆರಿಕದ ಹೂಡಿಕೆದಾರ ಮತ್ತು ಕೊಡುಗೈ ದಾನಿ ವಾರೆನ್ ಬಫೆಟ್, ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಅಂಬಾನಿ ಅವರ ಒಟ್ಟು ಸಂಪತ್ತು 5.64 ಲಕ್ಷ ಕೋಟಿ ರೂ.ನಷ್ಟಿದೆ. 2020ರಲ್ಲಿಅಂಬಾನಿಯು ತಮ್ಮ ಸಂಪತ್ತಿಗೆ 1.18 ಲಕ್ಷ ಕೋಟಿ ರೂ. ಸೇರಿಸಿದ್ದಾರೆ. ಬಂಡವಾಳ ಸಂಗ್ರಹಣೆಯಲ್ಲಿ ಏರಿಕೆಯಿಂದಾಗಿ ಅವರ ಸಂಪತ್ತು ವೃದ್ಧಿಯಾಗಿದೆ.
ವಿಶ್ವದ ಟಾಪ್ 5 ಧನಿಕರು
ಅಮೆಜಾನ್ ಸಿಇಒ ಜೆಫ್ ಬಿಜೋಸ್ ಅವರು ವಿಶ್ವದ ನಂ.1 ಕುಬೇರರಾಗಿದ್ದು ಅವರು 14.13 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ. ಬಿಜೋಸ್, ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಬರ್ನಾರ್ಡ್ ಅರ್ನಾಲ್ಟ್, ಮಾರ್ಕ್ ಜುಕರ್‌ಬರ್ಗ್ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಅಂಬಾನಿ ಇದ್ದಾರೆ.
ಆದರೆ ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಅಂಬಾನಿ ಆರನೇ ಸ್ಥಾನದಲ್ಲಿದ್ದಾರೆ. ಸ್ಥಾನ ಎಷ್ಟೇ ಇರಲಿ, ಅವರ ಸಂಪತ್ತು ಮಾತ್ರ ಏಕಾಏಕಿ ಏರಿಕೆಯಾಗಿರುವುದು ನಿಜ.
Comments are closed.