ನವದೆಹಲಿ: ಚೀನಾ ಮೂಲದ್ದು ಎಂಬ ಕಾರಣಕ್ಕೆ ಭಾರತದಲ್ಲಿ ಬ್ಯಾನ್ ಆಗಿರುವ ಶಾರ್ಟ್ ವಿಡಿಯೋ ಆ್ಯಪ್ ಟಿಕ್ಟಾಕ್ ಮತ್ತೆ ಭಭಾರತದಲ್ಲಿ ಸೇವೆ ಆರಂಭಿಸುವ ಉತ್ಸಾಹದಲ್ಲಿದೆ.
ಹೌದು… ಜಾಗತಿಕವಾಗಿ ಉತ್ತಮ ವಹಿವಾಟು ಸಂಬಂಧ ಉಳಿಸಿಕೊಳ್ಳಲು ಚೀನಾದಿಂದ ಅಂತರ ಕಾಪಾಡಿಕೊಳ್ಳಲೇಬೇಕಿದೆ. ಹೀಗಾಗಿ ತನ್ನ ಕೇಂದ್ರ ಸ್ಥಾನವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಚೀನಾವನ್ನೇ ಬಿಟ್ಟೋಡುತ್ತಿದೆ.
ಇಂಗ್ಲೆಂಡ್ನಲ್ಲಿ ಮುಖ್ಯ ಕಚೇರಿ ಹೊಂದಲು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಟಿಕ್ಟಾಕ್. ಕೇಂದ್ರ ಕಚೇರಿಗೆ ಲಂಡನ್ ಸೇರಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.
ಭಾರತದ ಬಳಿಕ ಅಮೆರಿಕ ಕೂಡ ಚೀನಿ ಆ್ಯಪ್ಗಳನ್ನು ನಿಷೇಧಿಸಿದೆ. ಹಲವು ಐರೋಪ್ಯ ದೇಶಗಳಲ್ಲೂ ಇದರ ಚೀನಾ ಮೂಲದ ಬಗ್ಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿ ಚೀನಾದಿಂದ ಹೊರಗಿದ್ದುಕೊಂಡೇ ಕಾರ್ಯಾಚರಿಸಲು ಕಂಪನಿ ಯೋಜನೆ ರೂಪಿಸಿದೆ.
ಲಂಡನ್ ಹೊರತುಪಡಿಸಿ ಬೇರಾವ ಸ್ಥಳಗಳನ್ನು ಕಂಪನಿ ಗುರುತಿಸಿದೆ ಎನ್ನುವುದು ಖಚಿತವಾಗಿಲ್ಲ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿನ ಸಿಬ್ಬಂದಿ ಹೊಂದಿದೆ. ಅಲ್ಲದೇ, ಅಮೆರಿಕದ ಕೆವಿನ್ ಮೇಯರ್ ಇದರ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಹೀಗಾಗಿ ಅಮೆರಿಕದಲ್ಲೂ ನೆಲೆ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ.
ಟಿಕ್ಟಾಕ್ ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಒಡೆತನದಲ್ಲಿರುವ ಆ್ಯಪ್ ಆಗಿದೆ. ಚೀನಾಗೆ ಮಾಹಿತಿ ರವಾನಿಸುತ್ತಿದೆ ಎಂಬ ಆರೋಪದಲ್ಲಿ ನಿಷೇಧಕ್ಕೆ ಒಳಗಾಗಿದೆ. ಒಂದು ಚೀನಾದಿಂದ ದೂರವುಳಿದಿದ್ದೇ ಆದಲ್ಲಿ ಮತ್ತೆ ಭಾರತದಲ್ಲಿ ಆ್ಯಪ್ ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.
Comments are closed.