ಅಸ್ಸಾಂ(ಜು.19): ದನಗಳ್ಳರೆಂದು ಶಂಕಿಸಿ ಜನರ ಗುಂಪೊಂದು ಮೂರು ಮಂದಿಯನ್ನು ಮನಬಂದಂತೆ ಥಳಿಸಿ ಸಾಯಿಸಿರುವ ಘಟನೆ ಅಸ್ಸಾಂನ ಗಡಿಜಿಲ್ಲೆ ಕರಿಮ್ಗಂಜ್ ಟೀ ಎಸ್ಟೇಟ್ನಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಜಾನುವಾರ ಕಳ್ಳಸಾಗಣೆ ಮಾಡುತ್ತಿದ್ದರೆನ್ನಲಾದ 7 ಮಂದಿ ಬಾಬುರಿಘಾಟ್ ಟೀ ಎಸ್ಟೇಟ್ನಲ್ಲಿರುವ ಪ್ರದೇಶ ಪಂಚಾಯತ್ ಕಾರ್ಯದರ್ಶಿ ರಾಜು ತೆಲೆಂಗಾ ಅವರ ಮನೆಗೆ ನುಗ್ಗಿದ್ದಾರೆ. ಇದರಿಂದ ಗಾಬರಿಗೊಂಡ ಟೀ ತೋಟದ ಕೆಲಸದಾಳುಗಳು ಅವರನ್ನು ಸುತ್ತುವರೆದಿದ್ದಾರೆ.
ಏಳು ಮಂದಿಯಲ್ಲಿ ನಾಲ್ವರು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಇನ್ನುಳಿದ ಮೂವರು ಅಲ್ಲಿನ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಟೀ ತೋಟದ ಕಾರ್ಮಿಕರು ಮತ್ತು ಗ್ರಾಮಸ್ಥರು ಆ ಮೂವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅವರು ಗಡಿಯುದ್ದಕ್ಕೂ ಹಸುಗಳನ್ನು ಕದಿಯುತ್ತಿದ್ದರು. ಇಷ್ಟೇ ಅಲ್ಲದೇ ಅವರು ಬಾಂಗ್ಲಾದೇಶಿಯರಾಗಿದ್ದು, ಇನ್ನಿತರೆ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸರು ಮೃತರಿಂದ ಬೇಲಿ ಕತ್ತರಿಸುವ ಸಾಧನ, ಹಗ್ಗ, ಚೀಲ, ತಂತಿ ಜೊತೆಗೆ ಬಿಸ್ಕೆಟ್ ಮತ್ತು ಬ್ರೆಡ್ನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಗಡಿ ಭದ್ರತಾ ಪಡೆ ಮೂಲಕ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಟೀ ಎಸ್ಟೇಟ್ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ಪ್ರದೇಶದಲ್ಲಿ ಜಾನುವಾರು ಕಳ್ಳತನ ಅತೀ ಸಾಮಾನ್ಯವಾಗಿದೆ.
Comments are closed.