
ನವದೆಹಲಿ: ಸತತ ನಾಲ್ಕನೇ ದಿನವಾದ ಭಾನುವಾರ ಕೂಡ ದೇಶದಾದ್ಯಂತ ದಾಖಲೆಯ ಪ್ರಮಾಣದಲ್ಲಿ ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,902 ಮಂದಿಯಲ್ಲಿ ವೈರಸ್ ಪತ್ತೆಯಾಗುವುದರೊಂದಿದೆ ಒಟ್ಟು ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ನಿನ್ನೆ ಒಂದೇ ದಿನ 543 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ.
ಇದೇ ವೇಳೆ 10,77,618 ಮಂದಿ ಸೋಂಕಿತರ ಪೈಕಿ 6,77,423 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, 3,73,379 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ.
ಮತ್ತೊಂದು ಆತಂಕದ ವಿಚಾರವೆಂದರೆ ಕಳೆದ 4 ದಿನಗಳಿಂದ ಹೊಸದಾಗಿ 1,10,040 ಸೋಂಕಿತರು ಪತ್ತೆಯಾಗಿದ್ದಾರೆ. 1913 ಜನರು ಸಾವನ್ನಪ್ಪಿದ್ದಾರೆ. ಈ ಹಿಂದೆಲ್ಲಾ 20, 15, 7 ದಿನಕ್ಕೆ 1 ಲಕ್ಷ ಹೊಸ ಕೇಸು ಪತ್ತೆಯಾಗುತ್ತಿದ್ದರೆ, ಅದೀಗ 3ಕ್ಕಂತಲೂ ಕಡಿಮೆ ದಿನಕ್ಕೆ ಇಳಿದಿದೆ. ಇದೇ ಪ್ರಮಾಣದಲ್ಲಿ ಪರೀಕ್ಷೆ ಹೆಚ್ಚಾದರೆ, ನಿತ್ಯವೂ 50,000 ಹೊಸ ಸೋಂಕಿತರು ಪತ್ತೆಯಾದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಇನ್ನು ರಾಜ್ಯವಾರು ಪರಿಶೀಲನೆ ನಡೆಸಿದರೆ, ಮಹಾರಾಷ್ಟ್ರದಲ್ಲಿ ನಿನ್ನೆ ಮತ್ತೆ 8 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, ತಮಿಳುನಾಡಿನಲ್ಲಿ ಶನಿವಾರ 4807, ಕರ್ನಾಟಕ 4537, ಆಂಧ್ರಪ್ರದೇಶ 3963, ಪಶ್ಚಿಮ ಬಂಗಾಳ 2198, ಬಿಹಾರ 1667, ದೆಹಲಿ 1475 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕೊರೋನಾ ಸೋಂಕಿಗೆ ನಿನ್ನೆ ತಮಿಳುನಾಡಿನಲ್ಲಿ 88, ಆಂಧ್ರಪ್ರದೇಶ 52, ಪಶ್ಚಿಮ ಬಂಗಾಳ 27, ದೆಹಲಿ 26 ಮತ್ತು ಗುಜರಾತ್ ನಲ್ಲಿ 19 ಮಂದಿ ಬಲಿಯಾಗಿದ್ದಾರೆ.
Comments are closed.