ಇಂದೋರ್: 10 ವರ್ಷದ ಬಾಲಕ ಕೇವಲ 30 ಸೆಕೆಂಡ್‍ನಲ್ಲಿ ಬ್ಯಾಂಕಿನಿಂದ 10 ಲಕ್ಷ ರೂ.ಗಳಿದ್ದ ಬ್ಯಾಗ್ ದೋಚಿ ಪರಾರಿಯಾಗಿರುವ ಘಟನೆ ಮಧ್ಯ ಪ್ರದೇಶದ ಜವಾದ್ ನಗರದಲ್ಲಿ ನಡೆದಿದೆ.
ನೀಮಚ್ ಜಿಲ್ಲೆಯ ಜವಾದ್ ನಗರದ ಸಹಕಾರಿ ಬ್ಯಾಂಕ್‍ನಲ್ಲಿ ಘಟನೆ ನಡೆದಿದ್ದು, ಬಾಲಕನ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರಿಸುಮಾರು 11 ಗಂಟೆ ವೇಳೆಗೆ ಬ್ಯಾಂಕ್ ಎಂಟ್ರಿ ಕೊಟ್ಟಿದ್ದ ಬಾಲಕ ಕ್ಯಾಶಿಯರ್ ಚೇಂಬರಿಗೆ ತೆರಳಿದ್ದ. ಆದರೆ ಕ್ಯಾಶ್ ಕೌಂಟರಿನ ಎದುರು ಗ್ರಾಹಕರು ನಿಂತಿದ್ದರು ಅವರಿಗೆ ಬಾಲಕನ ಕೃತ್ಯದ ಬಗ್ಗೆ ಯಾವುದೇ ಸುಳಿವು ಲಭಿಸಿರಲಿಲ್ಲ.
ಕೆಲ ನೋಟುಗಳನ್ನು ಕೆಳಗೆ ಬೀಳಿಸಿದ್ದ ಬಾಲಕ ಕ್ಷಣ ಮಾತ್ರದಲ್ಲಿ ಹಣವಿದ್ದ ಬ್ಯಾಗ್ ತೆಗೆದುಕೊಂಡು ಎಸ್ಕೇಪ್ ಆಗಿದ್ದ. ಬ್ಯಾಂಕ್‍ನ ಸೆಕ್ಯೂರಿಟಿ ಬಾಲಕನ ವರ್ತನೆಯನ್ನು ಗಮನಿಸಿ ಆತನ ಹಿಂದೆ ಓಡಿದ ಸಂದರ್ಭದಲ್ಲೇ ಕೃತ್ಯ ಬೆಳಕಿಗೆ ಬಂದಿತ್ತು. ಕೃತ್ಯಕ್ಕೂ ಮುನ್ನ ಬಾಲಕ ಸುಮಾರು 30 ನಿಮಿಷ ಬ್ಯಾಂಕ್‍ನಲ್ಲಿ ಸಮಯದ ಕಳೆದಿದ್ದ. ಅಲ್ಲದೇ ಬಾಲಕನಿಗೆ 20 ವರ್ಷದ ಯುವಕ ಸೂಚನೆಗಳನ್ನು ನೀಡುತ್ತಿದದ್ದು ಸಿಸಿಟಿವಿ ದೃಶ್ಯಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಬಾಲಕನ ಎತ್ತರ ಕಡಿಮೆ ಇದ್ದ ಕಾರಣ ಗ್ರಾಹಕರಿಗೆ ಆತನ ಕೃತ್ಯದ ಬಗ್ಗೆ ತಿಳಿಯಲಿಲ್ಲ ಎಂದು ಎಸ್‍ಪಿ ಮನೋಜ್ ರಾಜ್ ಹೇಳಿದ್ದಾರೆ.
ಬ್ಯಾಂಕ್ ಹೊರ ಭಾಗದ ಸಿಸಿಟಿಬಿ ದೃಶ್ಯಗಳಲ್ಲಿ ಬಾಲಕ ಹಾಗೂ ಆತನಿಗೆ ಸೂಚನೆಗಳನ್ನು ನೀಡುತ್ತಿದ್ದ ಯುವಕ ಬೇರೆ ಬೇರೆ ದಿಕ್ಕುಗಳಿಗೆ ಪರಾರಿಯಾಗಿರುವುದು ಸೆರೆಯಾಗಿದೆ. ಘಟನೆ ಕುರಿತು ಸಂಶಯದ ಮೇಲೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳಿಂದ ಬ್ಯಾಂಕ್ ವಾತಾವರಣದ ಕುರಿತು ಪರಿಶೀಲನೆ ನಡೆಸಿದ್ದ ಗ್ಯಾಂಗ್‍ನ ಸದಸ್ಯರು ಬಾಲಕನ ಮೂಲಕ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಘಟನೆಯ ಕುರಿತು ತನಿಖೆ ನಡೆಸಿರುವ ಪೊಲೀಸರಿಗೆ ಕೃತ್ಯದ ಹಿಂದೆ ನಟೋರಿಯಸ್ ಗ್ಯಾಂಗ್‍ವೊಂದರ ಕೈವಾಡ ಇರುವುದು ತಿಳಿದು ಬಂದಿದೆ. ಈ ಗ್ಯಾಂಗ್ 10 ರಿಂದ 14 ವರ್ಷದ ಮಕ್ಕಳನ್ನು ಮಾತ್ರ ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುತ್ತದೆ. ಇದರಲ್ಲಿ ಬಾಲಕಿಯರನ್ನು ಬಳಸಿಕೊಳ್ಳಲಾಗುತ್ತದೆ. ಅಲ್ಲದೇ ಅವರಿಗೆ ಅತ್ಯುತ್ತಮವಾಗಿ ಇಂಗ್ಲೀಷ್ ಮಾತನಾಡುವ ಸಾಮರ್ಥ್ಯವಿರುತ್ತದೆ ಹಾಗೂ ಉತ್ತಮ ಉಡುಗೆ ಧರಿಸಿ ಬ್ಯಾಂಕ್ ಹಾಗೂ ಇತರೇ ಸ್ಥಳಗಳಿಗೆ ಎಂಟ್ರಿ ಕೊಡುತ್ತಾರೆ. ತಮ್ಮಲ್ಲಿಯೇ ಮಾತನಾಡಿಕೊಂಡು ಜನರಲ್ಲಿ ಬೇರ್ಪಡುವುದರಿಂದ ಅವರ ಬಗ್ಗೆ ಜನರಿಗೆ ಯಾವುದೇ ಸಂದೇಹ ಮೂಡುವುದಿಲ್ಲ.
ಇಂದೋರ್ ಹಾಗೂ ನೀಮಚ್ ಸೇರಿದಂತೆ ಹಲವು ಪ್ರದೇಶಗಳ ಬ್ಯಾಂಕ್ ಹಾಗೂ ಮದುವೆ ಸಮಾರಂಭಗಳಲ್ಲಿ ಈ ಗ್ಯಾಂಗ್‍ನ ಕೃತ್ಯಗಳು ಹೆಚ್ಚಾಗಿದೆ. ಕೃತ್ಯಕ್ಕೆ ಮಕ್ಕಳನ್ನೇ ಗ್ಯಾಂಗ್‍ನ ಸದಸ್ಯರು ಬಳಸುತ್ತಾರೆ. ಏಕೆಂದರೆ ಕಳ್ಳತನ ಮಾಡುವ ವೇಳೆ ಮಕ್ಕಳು ಸಿಕ್ಕಿಬಿದ್ದರು ಅವರಿಗೆ ಹೆಚ್ಚಿನ ಶಿಕ್ಷೆ ಆಗುವುದಿಲ್ಲ. ಅಲ್ಲದೇ ಮಕ್ಕಳು ಕೂಡ ಗ್ಯಾಂಗ್‍ನ ಮಾಹಿತಿಯನ್ನು ಪೊಲೀಸರಿಗೆ ಬಿಟ್ಟುಕೊಡುವುದಿಲ್ಲ ಎಂಬ ನಂಬಿಕೆ ಅವರಿಗಿದೆ.
Comments are closed.