ರಾಷ್ಟ್ರೀಯ

ಭಾರತ, ಚೀನ ಹಿರಿಯ ಸೇನಾ ಅಧಿಕಾರಿಗಳ ನಡುವೆ 15 ಗಂಟೆಗಳ ಕಾಲ ಉನ್ನತ ಮಟ್ಟದ ಮಾತುಕತೆ

Pinterest LinkedIn Tumblr


ನವದೆಹಲಿ:ಭಾರತ ಮತ್ತು ಚೀನಾ ನಡುವಿನ ಎಲ್ ಎಸಿ(ವಾಸ್ತವ ಗಡಿ ನಿಯಂತ್ರಣ ರೇಖೆ) ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಹಿರಿಯ ಸೇನಾ ಅಧಿಕಾರಿಗಳ ನಡುವಿನ ಉನ್ನತ ಮಟ್ಟದ ಮಾತುಕತೆ ಕಳೆದ 15 ಗಂಟೆಗಳ ಕಾಲ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ವಾಸ್ತವ ಗಡಿನಿಯಂತ್ರಣ ರೇಖೆ(ಎಲ್ ಎಸಿ) ಬಳಿಯಲ್ಲಿನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಲೆಫ್ಟಿನೆಂಟ್ ಜನರಲ್ ಮಟ್ಟದ ನಾಲ್ಕನೇ ಹಂತದ ಮಾತುಕತೆ ಮಂಗಳವಾರ ಬೆಳಗ್ಗೆ 11.30ಕ್ಕೆ ಆರಂಭವಾಗಿದ್ದು, ಇದು ಬುಧವಾರ ಬೆಳಗ್ಗಿನ ಜಾವ 2ಗಂಟೆಗೆ ಮುಕ್ತಾಯಗೊಂಡಿರುವುದಾಗಿ ವರದಿ ಹೇಳಿದೆ.

ಲಡಾಖ್ ನ ಗಲ್ವಾನ್ ಕಣಿವೆ ಪ್ರದೇಶದ ಎಲ್ ಎಸಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ ನಡೆದ ಚರ್ಚೆಯ ವಿಷಯ ಇನ್ನಷ್ಟೇ ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕಾಗಿದೆ ಎಂದು ವರದಿ ತಿಳಿಸಿದೆ.

ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ನೇತೃತ್ವದ ಭಾರತದ ನಿಯೋಗದಲ್ಲಿ ಲೇಹ್ ಬೇಸ್ ನ ಕಮಾಂಡರ್ ಗಳು ಹಾಗೂ ದಕ್ಷಿಣ ಕ್ಸಿನ್ ಜಿಯಾಂಗ್ ಸೇನಾ ವಲಯದ ಮೇಜರ್ ಜನರಲ್ ಲಿಯೂ ಲಿನ್ ಭಾಗವಹಿಸಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಲಡಾಖ್ ನ ಎಲ್ ಎಸಿ ಬಳಿ ಇರುವ ಉಭಯ ದೇಶಗಳ ಸೇನೆಯನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಭಾರತ ಮತ್ತು ಚೀನಾ ಚರ್ಚೆ ನಡೆಸುತ್ತಿದೆ. ಇದರಲ್ಲಿ ಪ್ಯಾಂಗಾಂಗ್ ತ್ಸೋ, ಡೆಪ್ಸಾಂಗ್ ಪ್ರದೇಶ ಕೂಡಾ ಸೇರಿದೆ ಎಂದು ಮೂಲಗಳು ತಿಳಿಸಿವೆ.

Comments are closed.