ರಾಷ್ಟ್ರೀಯ

ಬಿಹಾರದಲ್ಲಿ ಜುಲೈ 16ರಿಂದ 30ರವರೆಗೂ ಸಂಪೂರ್ಣ ಲಾಕ್​ಡೌನ್​​

Pinterest LinkedIn Tumblr


ನವದೆಹಲಿ(ಜು.14): ಬಿಹಾರದಲ್ಲೂ ಕೊರೋನಾ ವೈರಸ್​ ಆರ್ಭಟ ಜೋರಾಗಿದೆ. ಇದರ ಪರಿಣಾಮ ಕೋವಿಡ್​-19 ಪಾಸಿಟಿವ್​​ ಪ್ರಕರಣಗಳ ಸಂಖ್ಯೆಯೂ 20 ಸಾವಿರ ಸಮೀಪಿಸಿದೆ. ಹೀಗಾಗಿಯೇ ಈ ಮಾರಕ ಕೊರೋನಾ ವೈರಸ್​​ ತಹಬದಿಗೆ ತರಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಮತ್ತೆ ಸಂಪೂರ್ಣ ಲಾಕ್​ಡೌನ್​​ ಘೋಷಿಸಿದೆ.

ಕಳೆದೊಂದು ವಾರದಿಂದ ಬಿಹಾರದಲ್ಲಿ ಕೊರೋನಾ ವೈರಸ್​ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದೆ. ಪ್ರತೀನಿತ್ಯ ಸಾವಿರಾರು ಕೋವಿಡ್​-19 ಪಾಸಿಟಿವ್​​ ಕೇಸ್​​ ಪತ್ತೆಯಾಗುತ್ತಿವೆ. ಈ ಆತಂಕಕಾರಿ ಬೆಳವಣಿಗೆ ಕಂಡು ಜನ ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಇದನ್ನು ತಡೆಯಲು ಬಿಹಾರದಲ್ಲಿ ಪೂರ್ಣ ಪ್ರಮಾಣದ ಲಾಕ್​ಡೌನ್​​ ಮಾಡುತ್ತಿದ್ದೇವೆ. ಜುಲೈ 16ನೇ ತಾರೀಕಿನಿಂದ 30ರವರೆಗೂ 16 ದಿನ ಸಂಪೂರ್ಣ ಲಾಕ್​ಡೌನ್​​ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಡಿಸಿಎಂ ಸುಶೀಲ್ ಮೋದಿ ಘೋಷಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಬಿಹಾರದಲ್ಲಿ 1,432 ಕೇಸ್​​ ವರದಿಯಾಗಿವೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆಯೂ 17,959ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ಯಾವುದೇ ಸೌಲಭ್ಯಗಳು ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ನಿಗಮಗಳು ಕೂಡ ಮುಚ್ಚಲ್ಪಡುತ್ತವೆ ಎನ್ನಲಾಗಿದೆ. ಕೇವಲ ರಕ್ಷಣಾ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಖಜಾನೆ, ಸಾರ್ವಜನಿಕ ಉಪಯುಕ್ತತೆಗಳು, ವಿಪತ್ತು ನಿರ್ವಹಣೆ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಅಂಚೆ ಕಚೇರಿಗಳು, ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸಂಬಂಧಿಸಿದ ಕಚೇರಿ ತೆರೆದಿರುತ್ತದೆ ಎಂದು ತಿಳಿದು ಬಂದಿದೆ.

ಪಟ್ನಾದಲ್ಲಿ ಈಗಾಗಲೇ ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ. ಆದರೀಗ, ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಇಡೀ ರಾಜ್ಯದಲ್ಲಿ ಲಾಕ್​ಡೌನ್​​ ಅನಿವಾರ್ಯ ಎಂದು ಸರ್ಕಾರ ಹೇಳಿದೆ.ಭಾರತದಲ್ಲಿ ಜುಲೈ 1ರಿಂದ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2 ರಿಂದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3 ರಿಂದ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4 ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9ರಿಂದ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 11ರಂದು 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಇದೇ ಟ್ರೆಂಡ್ ಮುಂದುವರೆದಿದ್ದು ಸೋಮವಾರ 28,498 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 9,06,752ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಸೋಮವಾರ 553 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 23,727ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 5,71,459 ಜನ ಮಾತ್ರ. ದೇಶದಲ್ಲಿ ಇನ್ನೂ 3,11,565 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

Comments are closed.