ರಾಷ್ಟ್ರೀಯ

ಕೊರೋನಾಗೆ ಆಗಸ್ಟ್. 15ರ ವೇಳೆಗೆ ವ್ಯಾಕ್ಸಿನ್ ಸಿಗುತ್ತದೆ ಎಂದಿರುವ ಮೋದಿ: ಯಾವುದೇ ಸೋಂಕಿಗೆ ವ್ಯಾಕ್ಸಿನ್ ತಯಾರಿಸಲು ಕನಿಷ್ಠ 2 ರಿಂದ 3 ವರ್ಷ ಬೇಕು ಎನ್ನುವ ತಜ್ಞರು

Pinterest LinkedIn Tumblr


ಇನ್ನೇನು ಒಂದು ತಿಂಗಳು ಕಾದರೆ ಸಾಕು, ಕೊರೋನಾಗೆ ವ್ಯಾಕ್ಸಿನ್ ಬಂದೇಬಿಡುತ್ತೆ. ಅಲ್ಲಿಗೆ ಎಲ್ಲಾ ಸಮಸ್ಯೆಗಳೂ ಅಂತ್ಯವಾಗುತ್ತೆ ಎನ್ನುವ ಆಶಾಭಾವನೆಯಲ್ಲೇ ಜನ ದಿನ ದೂಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಆಗಸ್ಟ್. 15 ರ ವೇಳೆಗೆ ವ್ಯಾಕ್ಸಿನ್ ಸಿಗುತ್ತೆ ಎಂದಿರುವುದರಿಂದ ಜನ ಬಹಳ ಆಸೆಯಿಂದಲೇ ಕಾಯುತ್ತಿದ್ದಾರೆ. ಆದರೆ, ತಜ್ಞರು ಮಾತ್ರ ಬೇರೆಯೇ ವಿಚಾರವನ್ನು ಹೇಳುತ್ತಿದ್ದಾರೆ.

ಆಗಸ್ಟ್ ಮಾತ್ರ ಅಲ್ಲ, 2020 ಮುಗಿದರೂ ವ್ಯಾಕ್ಸಿನ್ ಬರೋ ಮಾತೇ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ಏಕೆಂದರೆ ಯಾವುದೇ ಸೋಂಕಿಗೆ ವ್ಯಾಕ್ಸಿನ್ ತಯಾರಿಸಲು ಕನಿಷ್ಠ 2 ರಿಂದ 3 ವರ್ಷಗಳೇ ಬೇಕು. ಈಗಿನ ಪರಿಸ್ಥಿತಿಯಲ್ಲಿ ವ್ಯಾಕ್ಸಿನ್ ತಯಾರಿಕೆಯನ್ನು ವೇಗವಾಗಿ ಮಾಡಲು ಪ್ರಯತ್ನ ಪಡಲಾಗುತ್ತಿದೆ ನಿಜ. ಆದರೂ, ವ್ಯಾಕ್ಸಿನ್ ಅಂತಿಮ ಹಂತ ತಲುಪಲು ಕನಿಷ್ಠ ಒಂದು ವರ್ಷವಾದರೂ ಬೇಕೇ ಬೇಕು ಎನ್ನಲಾಗುತ್ತಿದೆ.

ಯಾವುದೇ ವ್ಯಾಕ್ಸಿನ್ ತಯಾರಾದರೆ ಅದರ ಯಶಸ್ಸಿನ ಪರ್ಸಂಟೇಜ್ ಪರೀಕ್ಷೆ ಮಾಡುವುದಕ್ಕೇ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಶೇ.30-40 ಯಶಸ್ವಿಯಾದರೂ ಕೂಡಾ ಏನೂ ಪ್ರಯೋಜನವಿಲ್ಲ. ವ್ಯಾಕ್ಸಿನ್ ಯಶಸ್ಸಿನ ಪ್ರಮಾಣ ಕನಿಷ್ಠ ಶೇ.70 ರಷ್ಟು ಇರಬೇಕು. ಇದೆಲ್ಲದರ ಪ್ರಯೋಗ ನಡೆಯೋದಕ್ಕೇ ಸಾಕಷ್ಟು ಸಮಯ ಆಗುತ್ತದೆ. ಹಾಗಾಗಿ ವ್ಯಾಕ್ಸಿನ್ ಬೇಗ ದೊರೆಯುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎನ್ನುತ್ತಿದ್ದಾರೆ ತಜ್ಞರು.

ಮೊದಲ ಹಂತದಲ್ಲಿ ವ್ಯಾಕ್ಸಿನ್ ಪ್ರಾಣಿಗಳ ಮೇಲೆ ಪ್ರಯೋಗವಾಗಿ ನಂತರ ಮನುಷ್ಯರ ಮೇಲೆ ಪ್ರಯೋಗ ಆಗಬೇಕು. ಇಷ್ಟೆಲ್ಲಾ ಆದ್ಮೇಲೆ ಅದರ ಅಡ್ಡಪರಿಣಾಮಗಳನ್ನು ಕೂಲಂಕುಷವಾಗಿ ಅಭ್ಯಾಸ ಮಾಡ್ಬೇಕು.‌ ಅದರ ಸಾಧಕ ಬಾಧಕ ಗಮನಿಸಿ ನಂತರವೇ ಜನರ ಬಳಕೆಗೆ ನೀಡಲಾಗುತ್ತದೆ.

ಹಾಗಾಗಿ ಇಷ್ಟೆಲ್ಲಾ ಆಗೋಕೆ ಏನಿಲ್ಲವೆಂದರೂ ಕನಿಷ್ಟ ಒಂದರಿಂದ ಒಂದೂವರೆ ವರ್ಷ ಬೇಕು ಎನ್ನುವುದು ತಜ್ಞರ ಲೆಕ್ಕಾಚಾರ. ಒಟ್ಟಲ್ಲಿ ಕೊರೋನಾ ವ್ಯಾಕ್ಸಿನ್‌ಗಾಗಿ ಆಸೆಯಿಂದ ಕಾಯುತ್ತಿದ್ದ ಜನ ಮಾತ್ರ ಇದೀಗ ತಜ್ಞರು ಮಾತಿಗೆ ನಿರಾಶೆಗೆ ಒಳಗಾಗುವಂತಾಗಿದೆ.

Comments are closed.