ನವದೆಹಲಿ (ಜು. 6): ಒಳ್ಳೆಯ ಉದ್ಯೋಗದ ಕನಸಿನೊಂದಿಗೆ ಸೌದಿ ರಾಷ್ಟ್ರಗಳಿಗೆ ವಲಸೆ ಹೋಗಿರುವ ಭಾರತೀಯರಿಗೆ ಇದೀಗ ಅಭದ್ರತೆ ಶುರುವಾಗಿದೆ. ಕುವೈತ್ ಸರ್ಕಾರ ತನ್ನ ದೇಶದಲ್ಲಿರುವ ವಿದೇಶೀ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನೂತನ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಈ ಕಾನೂನು ಜಾರಿಯಾದರೆ ಕುವೈತ್ನಲ್ಲಿರುವ ಭಾರತದ 7 ಲಕ್ಷ ಉದ್ಯೋಗಿಗಳು ದೇಶ ಬಿಡಬೇಕಾಗುತ್ತದೆ.
ವಿದೇಶಗಳಿಂದ ಉದ್ಯೋಗಕ್ಕಾಗಿ ವಲಸೆ ಬಂದವರಿಗೆ ಸಂಬಂಧಪಟ್ಟ ಕಾನೂನು ಜಾರಿಗೊಳಿಸಲು ಕುವೈತ್ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ ಒಂದು ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿ ತನ್ನ ಶಿಫಾರಸುಗಳನ್ನು ಕೂಡ ಸರ್ಕಾರದ ಮುಂದಿಟ್ಟಿದೆ. ಈ ಹೊಸ ಕಾನೂನಿನ ಪ್ರಕಾರ ಭಾರತೀಯರ ಸಂಖ್ಯೆ ದೇಶದ ಜನಸಂಖ್ಯೆಗಿಂತ ಶೇ. 15 ಮೀರಬಾರದು. ಈಗ ಕುವೈತ್‌ನಲ್ಲಿ ಭಾರತೀಯ ವಲಸಿಗರೇ ಹೆಚ್ಚಾಗಿದ್ದಾರೆ. ಹೀಗಾಗಿ, ಹೊಸ ಕಾನೂನಿನಿಂದ ಬೇರೆ ದೇಶದವರಿಗಿಂತ ಭಾರತೀಯರ ಮೇಲೇ ಹೊಡೆತ ಜಾಸ್ತಿ.
ಹೊಸ ಕಾನೂನಿನ ಪ್ರಕಾರ ಕುವೈತ್ನಲ್ಲಿರುವ 7ರಿಂದ 8 ಲಕ್ಷ ಭಾರತೀಯರು ದೇಶ ಬಿಟ್ಟು ಭಾರತಕ್ಕೆ ವಾಪಾಸಾಗುವ ಸಾಧ್ಯತೆಯಿದೆ. ತಮ್ಮ ದೇಶದಲ್ಲಿ ಕುವೈತ್ನವರಿಗೇ ಉದ್ಯೋಗ ಸಿಗದ ಪರಿಸ್ಥಿತಿ ಎದುರಾಗಿದೆ. ಕುವೈತ್ನ ಹೊಸ ಕಾನೂನಿನ ಕುರಿತು ಭಾರತ ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಕುವೈತ್ನಲ್ಲಿರುವ ವಲಸಿಗರ ಪೈಕಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಈಜಿಪ್ಟ್ ಇದೆ. ಹೀಗಾಗಿ, ಈ ಕಾನೂನು ಜಾರಿಯಾದರೆ ಈಜಿಪ್ಟ್ ಪ್ರಜೆಗಳ ಮೇಲೂ ಪರಿಣಾಮ ಬೀರಲಿದೆ. ಕೊರೋನಾದಿಂದಾಗಿ ಕುವೈತ್ನಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾಗಿರುವುದರಿಂದ ವಲಸಿಗರನ್ನು ಅವರ ದೇಶಕ್ಕೆ ಕಳುಹಿಸಿ, ತಮ್ಮ ದೇಶದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲು ಸರ್ಕಾರ ಚಿಂತಿಸಿದೆ ಎನ್ನಲಾಗಿದೆ.
Comments are closed.