ರಾಷ್ಟ್ರೀಯ

ಲಡಾಖ್​ ಪ್ರದೇಶದಿಂದ ಹಿಂದೆ ಸರಿದ ಚೀನಾ ಸೇನೆ

Pinterest LinkedIn Tumblr


ನವದೆಹಲಿ (ಜು. 6): ಭಾರತ-ಚೀನಾ ಗಡಿಯಲ್ಲಿರುವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಗಲಾಟೆಯಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದರು. ಇದಾದ ಬಳಿಕ ಲಡಾಖ್​ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವಿವಾದಿತ ಗಾಲ್ವಾನ್​ ಕಣಿವೆಯ ಪ್ರದೇಶ ಮತ್ತಿತರೆ ಎರಡು ಪ್ರದೇಶಗಳಿಂದ ಚೀನಾ ಸೇನೆ ಹಿಂದೆ ಸರಿದಿದೆ. ಈ ಮೂಲಕ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಕೊಂಚ ಮಟ್ಟಿಗೆ ಬಗೆಹರಿದಂತಾಗಿದೆ.

ಈ ಬಗ್ಗೆ ಭಾರತೀಯ ಸೇನೆಯ ಮೂಲಗಳು ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಲಡಾಖ್​ನಲ್ಲಿರುವ ಗಾಲ್ವಾನ್ ಕಣಿವೆಯಿಂದ ಚೀನೀ ಸೈನಿಕರು ಹಿಂದೆ ಸರಿದಿದ್ದಾರೆ. ಗಾಲ್ವಾನ್​ ಕಣಿವೆಯ ಗಡಿಯಲ್ಲಿ ಗಲಾಟೆ ನಡೆದ ಬಳಿಕ ಚೀನಾ ತನ್ನ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜನೆ ಮಾಡಿತ್ತು. ಇದೀಗ ಆ ಸೇನೆ ಕೊಂಚ ಹಿಂದಕ್ಕೆ ಸರಿದಿದೆ. ವಿವಾದಿತ ಪ್ರದೇಶಗಳಾದ ಗಾಲ್ವಾನ್​ ಕಣಿವೆ, ಗೋಗ್ರಾದಲ್ಲಿ 2 ತಿಂಗಳಿಂದ ಚೀನಾ ಸೇನೆ ಬೀಡುಬಿಟ್ಟಿತ್ತು.

ಇದೀಗ ಆ ವಿವಾದಿತ ಪ್ರದೇಶದಿಂದ ಸುಮಾರು 2 ಕಿ.ಮೀ ನಷ್ಟು ಚೀನಾ ಸೇನೆ ಹಿಂದಕ್ಕೆ ಸರಿದಿದೆ. ಹಾಗೇ ಗಾಲ್ವಾನ್ ಕಣಿವೆಯಲ್ಲಿ ನಿರ್ಮಿಸಿಕೊಂಡಿದ್ದ ಟೆಂಟ್​ಗಳನ್ನು ಕೂಡ ಸ್ಥಳಾಂತರ ಮಾಡಲಾಗಿದೆ. ಗಡಿಯ ಬಿಕ್ಕಟ್ಟಿನ ಬಗ್ಗೆ ಈ ಮೊದಲು ಚೀನಾ ಮತ್ತು ಭಾರತದ ಸೇನಾ ಕಮಾಂಡರ್​ಗಳ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಗಾಲ್ವಾನ್​ ಕಣಿವೆಯಿಂದ ಎರಡೂ ದೇಶಗಳ ಸೇನೆಯನ್ನು ಹಿಂಪಡೆಯುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಚೀನಾ ತನ್ನ ಸೇನೆಯನ್ನು ವಾಪಾಸ್​ ಕರೆಸಿಕೊಂಡರೆ ಭಾರತ ಕೂಡ ವಿವಾದಿತ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವುದಾಗಿ ತಿಳಿಸಿತ್ತು.

ಅದರಂತೆ ಇಂದು ಚೀನಾ ಸೇನೆ ವಿವಾದಿತ ಸ್ವಲ್ಪ ಹಿಂದಕ್ಕೆ ಸರಿದಿದೆ. ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಉದ್ಧಟನ ತೋರಿ, ಕೈ ಮಿಲಾಯಿಸಿದ ಬಳಿಕ ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಬ್ಯಾನ್ ಮಾಡಬೇಕೆಂಬ ಅಭಿಯಾನಗಳು ನಡೆದಿದ್ದವು. ನಂತರ ಭಾರತ ಸರ್ಕಾರ ಚೀನಾದ ಮೊಬೈಲ್ ಆ್ಯಪ್​ಗಳನ್ನು ಬ್ಯಾನ್​ ಮಾಡಿ ಆದೇಶ ಹೊರಡಿಸಿತ್ತು.

Comments are closed.