ರಾಷ್ಟ್ರೀಯ

ಇಂದು ಅನ್ ಲಾಕ್ -1 ಮುಕ್ತಾಯ; ನಾಳೆಯಿಂದ ಅನ್ ಲಾಕ್ -2 ಜಾರಿ

Pinterest LinkedIn Tumblr


ನವದೆಹಲಿ(ಜೂ.29): ಕೊರೋನಾ ನಿಯಂತ್ರಿಸಲು ಜಾರಿಗೆ ತಂದಿದ್ದ ಲಾಕ್​ಡೌನ್​ ನಿಯಮಗಳನ್ನು ಸಡಿಲಿಸಿ ಜೂನ್ 1ರಿಂದ ಅನ್ ಲಾಕ್ -1 ಮಾಡಲಾಗಿತ್ತು. ನಾಳೆಗೆ ಅನ್ ಲಾಕ್-1 ಮುಕ್ತಾಯವಾಗಲಿದ್ದು ಜುಲೈ 1ರಿಂದ ಅನ್ ಲಾಕ್- 2 ಶುರುವಾಗಲಿದೆ. ಅನ್ ಲಾಕ್ 2ನಲ್ಲಿ ಏನೇನು ನಿರ್ಬಂಧಗಳಿರುತ್ತವೆ? ಏನೆಲ್ಲಾ ವಿನಾಯಿತಿಗಳಿರುತ್ತವೆ ಎಂಬ ವಿವರ ಇಲ್ಲಿದೆ.

ದೇಶಾದ್ಯಂತ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಅನ್ ಲಾಕ್-2ನಲ್ಲಿ ಹೆಚ್ಚಿನ ವಿನಾಯಿತಿಗಳು ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಅನ್ ಲಾಕ್-2 ವೇಳೆ ಮುಖ್ಯವಾಗಿ ಶಾಲಾ ಕಾಲೇಜುಗಳನ್ನು ತೆರೆಯುವ ಬಗ್ಗೆ, ವಿಮಾನ ಹಾರಾಟಗಳ ಬಗ್ಗೆ ಮತ್ತು ಮೆಟ್ರೋ ಸಂಚಾರ ಆರಂಭಿಸುವ ಬಗ್ಗೆ ಹೊಸ ಮಾರ್ಗಸೂಚಿ ಹೊರಬೀಳಲಿದೆ.

ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಬಹುತೇಕ ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ಈ ಹಿಂದೆ ಆಗಸ್ಟ್ ಮಧ್ಯದಿಂದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದರು.

ಈ ನಡುವೆ‌ ಕೊರೋನಾ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ, ಐಸಿಎಸ್ಇ, ಐಎಸ್ ಸಿ ಮತ್ತು ಹಲವಾರು ಇತರೆ ರಾಜ್ಯ ಮಂಡಳಿಗಳು 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ತಕ್ಷಣಕ್ಕೆ ತರಗತಿಗಳನ್ನು ಪುನರಾರಂಭಿಸಲು ಮನಸ್ಸಿಲ್ಲದಿರುವುದು ಗೊತ್ತಾಗುತ್ತದೆ. ಆದುದರಿಂದ ಅನ್ ಲಾಕ್ -2 ವೇಳೆ ಶಾಲಾ-ಕಾಲೇಜು ತೆರೆಯಲು ಅನುಮತಿ ಸಿಗುವ ಸಾಧ್ಯತೆಗಳಿಲ್ಲ.

ಅಂತರಾಷ್ಟ್ರೀಯ ವಿಮಾನಯಾನ ಆರಂಭಿಸುವ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ವಂದೇ ಭಾರತ್ ಮಿಷನ್‌ನಲ್ಲಿ ಏರ್ ಇಂಡಿಯಾ ಏಕಸ್ವಾಮ್ಯದ ಬಗ್ಗೆ ಇತರೆ ವಿಮಾನಯಾನ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಜುಲೈ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನಗಳು ಪುನರಾರಂಭಗೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಗೆ ವಿಮಾನ ಹಾರಾಟ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.

ಈ ನಡುವೆ ಕೊರೋನಾ ಪರಿಸ್ಥಿತಿ ಹಿಡಿತಕ್ಕೆ ಬಂದರೆ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಜುಲೈನಲ್ಲಿ ದೇಶಿಯ ವಿಮಾನ‌ ಹಾರಾಟವನ್ನು ಹೆಚ್ಚಿಸಬಹುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯದಂತೆ ರಾಜ್ಯಗಳ ಸಲಹೆ ಆಧರಿಸಿ ವಿಮಾನ ಹಾರಾಟ ಆರಂಭಿಸುವ ಸಾಧ್ಯತೆ ಇದೆ.

Comments are closed.