ರಾಷ್ಟ್ರೀಯ

ಅನ್​ಲಾಕ್ 2ರಲ್ಲಿ ಶಾಲೆ, ಮೆಟ್ರೋ ಆರಂಭಕ್ಕೆ ಕೇಂದ್ರದ ಚಿಂತನೆ

Pinterest LinkedIn Tumblr


ನವದೆಹಲಿ; ಅನ್​ಲಾಕ್​ 2ನೇ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ, ಶಿಕ್ಷಣ ಸಂಸ್ಥೆ ಮತ್ತು ಮೆಟ್ರೋ ಸೇವೆಯನ್ನು ಮರುಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದೆ. ಹಾಗೂ ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಯನ್ನು ಮುಂದಿನ ವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹೌದು, ಅನ್​ಲಾಕ್ 2ನೇ ಹಂತದ ಮಾರ್ಗಸೂಚಿ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸರ್ಕಾರಿ ಅಧಿಕೃತ ಮೂಲಗಳು ತಿಳಿಸಿವೆ. ಎರಡನೇ ಹಂತದ ಅನ್​ಲಾಕ್​ನಲ್ಲಿ ಕೆಲ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ಮಾರ್ಗಗಳಿಗೆ ವಿಮಾನ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ. ಮೆಟ್ರೋ ಸೇವೆ ಮರುಆರಂಭಕ್ಕೆ ಕೆಲ ಸಮಯ ಹಿಡಿಯುವ ಸಾಧ್ಯತೆ ಇದೆ.

ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮೆಟ್ರೋ ಮರುಓಡಾಟಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ. ದೆಹಲಿಯಲ್ಲಿ ಅತಿಹೆಚ್ಚು ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಮುಂಬೈನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಸುಧಾರಣೆ ಕಂಡುಬರುತ್ತಿದೆ. ಆದರೆ, ಸಬ್​ಅರ್ಬನ್​ಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಕೊರೋನಾ ನಿಯಂತ್ರಣಕ್ಕಾಗಿ ದಕ್ಷಿಣ ಚೆನ್ನೈನಲ್ಲಿ ಮತ್ತೆ ಲಾಕ್​ಡೌನ್ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೆಲ ವಾರ್ಡ್​ಗಳಲ್ಲಿ ಲಾಕ್​ಡೌನ್ ಮಾಡಲಾಗಿದೆ.

ಶಿಕ್ಷಣ ಸಂಸ್ಥೆಗಳ ಮರುಆರಂಭಕ್ಕೂ ಸರ್ಕಾರ ಹಿಂಜರಿಯುತ್ತಿದೆ. ಕರ್ನಾಟಕ ಹೊರತುಪಡಿಸಿ ಹಲವು ರಾಜ್ಯಗಳು ಬೋರ್ಡ್ ಎಕ್ಸಾಂಗಳನ್ನು ನಿಷೇಧಿಸಿವೆ. ಸಿಬಿಎಸ್​ಇ ಮತ್ತು ಐಸಿಎಸ್​ಇ ಮತ್ತೊಂದು ಹೊಸ ದಿನಾಂಕ ಘೋಷಣೆ ಮಾಡಿವೆ. ಅನ್​ಲಾಕ್ 1ರಲ್ಲಿ ಮೇ 30ರಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಅಲ್ಲಿನ ಪೋಷಕರು ಮತ್ತು ತಜ್ಞರ ಅಭಿಪ್ರಾಯ ಪಡೆದು ಶಾಲೆ, ಕಾಲೇಜು ಆರಂಭಕ್ಕೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚನೆ ನೀಡಿತ್ತು.

ವಿಮಾನ ಹಾರಾಟಕೆಲ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ಸಮಾಲೋಚನೆ ಆರಂಭಿಸಲಾಗಿದೆ. ವಂದೇ ಮಾತರಂ ಮಿಷನ್ ಅಡಿ ಏರ್ ಇಂಡಿಯಾ ವಿಮಾನ ಅಮೆರಿಕಕ್ಕೆ ಹಾರಾಟ ನಡೆಸುವುದಕ್ಕೆ ಯುಎಸ್ ಆಡಳಿತ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಅಮೆರಿಕ-ಭಾರತ ನಡುವೆ ವಿಮಾನ ಹಾರಾಟಕ್ಕೆ ಅಮೆರಿಕ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಲಾಗಿಲ್ಲ. ಇದು ಏಕಸ್ವಾಮ್ಯ ಎಂದು ಕರೆದಿರುವ ಅಮೆರಿಕ ಏರ್ ಇಂಡಿಯಾದ ವಂದೇ ಭಾರತ್ ವಿಮಾನ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ. ಯುಎಇಯಿಂದಲೂ ಇದೇ ರೀತಿಯ ಆಕ್ಷೇಪಣೆ ಬಂದಿದೆ.

ದುಬೈ ಮತ್ತು ಇತರೆ ಗಲ್ಫ್ ದೇಶಗಳಿಗೆ ವಿಮಾನ ಹಾರಾಟಕ್ಕೆ ಅವಕಾಶ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಅನ್​ಲಾಕ್​ 2ರಲ್ಲಿ ಕಾರ್ಮಿಕ ವಲಯದಲ್ಲಿ ಉದ್ಯೋಗ ಅವಕಾಶ ಹೆಚ್ಚಳಕ್ಕೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಳಿದ ವಲಸೆ ಕಾರ್ಮಿಕರ ಕೌಶಲ್ಯ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಅನ್​ಲಾಕ್ 2 ರಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಕಾರ್ಮಿಕರ ಉದ್ಯೋಗದ ಮೇಲೆ ಕೇಂದ್ರೀಕರಿಸುತ್ತದೆ. ಅನ್​ಲಾಕ್​ 2 ರಲ್ಲಿ ಕೈಗಾರಿಕೆಗಳ ಸ್ವಾವಲಂಬನೆಯತ್ತ ಗಮನ ಹರಿಸುವ ಸಾಧ್ಯತೆಯಿದೆ. ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರನ್ನು ನೇಮಿಸಿಕೊಳ್ಳಲು ಉದ್ಯಮಗಳಿಗೆ ಉತ್ತೇಜನ ನೀಡಲಾಗುವುದು.

Comments are closed.