ರಾಷ್ಟ್ರೀಯ

CBSE ಯ 10 ಮತ್ತು 12ನೇ ತರಗತಿ ಪರೀಕ್ಷೆ ರದ್ದು

Pinterest LinkedIn Tumblr


ನವದೆಹಲಿ(ಜೂನ್ 25): ಕೇಂದ್ರದ ಸಿಬಿಎಸ್​ಇ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಿರುವುದಾಗಿ ಸಿಬಿಎಸ್​ಇ ಮಂಡಳಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಇವತ್ತು ಗುರುವಾಗ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಕೊರೋನಾ ಭೀತಿಯಿಂದಾಗಿ ಸಿಬಿಎಸ್​ಇ ಮಂಡಳಿ ಪರೀಕ್ಷೆಗಳನ್ನ ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಆರ್​ಡಿ ಸಚಿವಾಲಯ ಹಾಗೂ ಸಿಬಿಎಸ್​ಇ ಮಂಡಳಿ ತನ್ನ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿವೆ.

ಇಲ್ಲಿ ಸಿಬಿಎಸ್​ಇಯ 10ನೇ ತರಗತಿ ಪರೀಕ್ಷೆಗೂ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಗೂ ಸಂಬಂಧವಿಲ್ಲ. ರಾಜ್ಯಾದ್ಯಂತ ಇವತ್ತು ಪ್ರಾರಂಭಗೊಂಡಿರುವ SSLC ಪರೀಕ್ಷೆಗಳು ಮುಂದುವರಿಯುತ್ತವೆ. ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಂಡಿರುವುದು ಸಿಬಿಎಸ್​ಇ ಮಂಡಳಿಯ ಪರೀಕ್ಷೆಗಳಿಗೆ ಮಾತ್ರ.

ಮೂಲಗಳ ಪ್ರಕಾರ, ಐಸಿಎಸ್​ಇ (ICSE) ಸಿಲಾಬಸ್​ನ ಸಾರ್ವತ್ರಿಕ ಪರೀಕ್ಷೆಗಳೂ ಕೂಡ ರದ್ದಾಗುವ ಸಾಧ್ಯತೆ ಇದೆ. ಮಾರ್ಚ್ ತಿಂಗಳ ಲಾಕ್​ಡೌನ್​ಗೆ ಮುನ್ನ ಸಿಬಿಎಸ್​ಇಯ ಕೆಲ ಪರೀಕ್ಷೆಗಳು ಮುಗಿದಿದ್ದವು. ಈಗ ಲಾಕ್​ಡೌನ್ ತೆರವಾಗಿರುವುದರಿಂದ ಉಳಿದ ಪರೀಕ್ಷೆಗಳನ್ನ ಜುಲೈ 1ರಿಂದ 15ರವರೆಗೆ ಮಾಡಿ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು ಮಂಡಳಿ ಯೋಜಿಸಿತ್ತು.

ಕೋವಿಡ್-19 ರೋಗ ಅಪಾಯಕಾರಿಯಾಗಿ ವ್ಯಾಪಿಸುತ್ತಿರುವುದರಿಂದ ಪರೀಕ್ಷೆಗಳನ್ನ ಆಯೋಜಿಸದಂತೆ ತಡೆಯಬೇಕು, ಪರೀಕ್ಷೆ ರದ್ದುಗೊಳಿಸಬೇಕು ಎಂದು ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್​​ಗೆ ಸಲ್ಲಿಕೆಯಾಗಿದ್ದವು. ಪರೀಕ್ಷೆ ಸಮೀಪಿಸುತ್ತಿರುವುದರಿಂದ ಅರ್ಜಿದಾರರ ಪರ ವಕೀಲ ರಿಷಿ ಮಲ್ಹೋತ್ರಾ ಅವರು ತ್ವರಿತವಾಗಿ ಇದರ ವಿಚಾರಣೆಯಾಗಬೇಕೆಂದು ಕೋರಿದ್ದರು. ಆ ವೇಳೆ, ಸರ್ಕಾರ ಮತ್ತು ಸಿಬಿಎಸ್​ಇ ಮಂಡಳಿ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಚಾರದ ಬಗ್ಗೆ ನಡೆಯುತ್ತಿರುವ ಮಾತುಕತೆ ಅಂತಿಮ ಹಂತದಲ್ಲಿದ್ದು ಬುಧವಾರ ಸಂಜೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನ ಗುರುವಾರಕ್ಕೆ ಮುಂದೂಡಿತು. ಸರ್ಕಾರದ ನಿರ್ಧಾರವನ್ನು ತನಗೆ ಗುರುವಾರ ತಿಳಿಸುವಂತೆ ಮೆಹ್ತಾರಿಗೆ ಸೂಚಿಸಿತ್ತು. ಅದರಂತೆ ಇವತ್ತು ಸರ್ಕಾರ ಮತ್ತು ಸಿಬಿಎಸ್​ಇ ಮಂಡಳಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ರದ್ದುಗೊಳಿಸಲು ನಿರ್ಧರಿಸಿದ್ದಾಗಿ ಮಾಹಿತಿ ನೀಡಿವೆ.

ಸಿಬಿಎಸ್​ಇ ಮಂಡಳಿಗೆ ನೊಂದಾಯಿಸಿದ್ದ 250 ವಿದೇಶೀ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ಈ ಮುಂಚೆಯೇ ರದ್ದುಗೊಳಿಸಲಾಗಿತ್ತು. ಕೊರೋನಾ ಅಪ್ಪಳಿಸುವುದಕ್ಕೂ ಮುನ್ನ ಶಾಲೆಗಳಲ್ಲಿ ನಡೆದಿದ್ದ ಪ್ರಾಕ್ಟಿಕಲ್ ಎಕ್ಸಾಂ ಅಥವಾ ಇಂಟರ್ನಲ್ ಅಸೆಸ್ಮೆಂಟ್​ನ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ಕೊಡಲು ಮಂಡಳಿ ನಿರ್ಧಾರ ಮಾಡಿತ್ತು. ಅದೇ ಅಂಶವನ್ನ ಇಟ್ಟುಕೊಂಡು ಭಾರತದಲ್ಲಿರುವ ಮಂಡಳಿ ಅಡಿಯ ಶಾಲೆಗಳ ಪೋಷಕರು ಪರೀಕ್ಷೆಗಳನ್ನ ರದ್ದು ಮಾಡಬೇಕೆಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸಿಬಿಎಸ್​ಇ ಮಂಡಳಿಯು ಭಾರತದಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆ ನಡೆಸಲು ಈ ಮುಂಚೆ ಮಾಡಿದ್ದ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ ಜುಲೈ 18ರಿಂದ ಮತ್ತು ಜುಲೈ 26ರಿಂದ ನಡೆಯುವ ಜೆಇಇ ಮತ್ತು ನೀಟ್ ಪರೀಕ್ಷೆಗಳು. ಈ ಸ್ಪರ್ಧಾತ್ಮಕ ಪರೀಕ್ಷೆಗಳು ಶುರುವಾಗುವ ಮುನ್ನ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ಮುಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದು ಸಿಬಿಎಸ್​ಇ ಲೆಕ್ಕಾಚಾರವಾಗಿತ್ತು. ಆದರೆ, ಕೊರೋನಾ ವೈರಸ್ ಸೋಂಕು ದಿನೇ ದಿನೇ ಅಪಾಯಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿರುವುದರಿಂದ ಪರೀಕ್ಷೆ ನಡೆಸುವುದು ಸಾಧುವಲ್ಲ ಎಂಬುದನ್ನು ಕಂಡುಕೊಂಡು ಪರೀಕ್ಷೆ ರದ್ದುಗೊಳಿಸಲು ನಿರ್ಧರಿಸಿದೆ.

Comments are closed.