ರಾಷ್ಟ್ರೀಯ

ಟ್ರಂಪ್‌ ಆದೇಶದಿಂದ ಎಚ್-‌4 ವೀಸಾ ಪಡೆದ ಹಲವರ ಮಡದಿಯರು ಇಂಡಿಯಾದಲ್ಲೇ ಬಾಕಿ

Pinterest LinkedIn Tumblr


ಜೂನ್‌ 24ಕ್ಕೆ ಮೊದಲ ಪಾಸ್‌ಪೋರ್ಟ್‌ ಮೇಲೆ ಸ್ಥಳೀಯ ರಾಯಭಾರ ಕಚೇರಿಯ ಸ್ಟ್ಯಾಂಪ್‌ ಬೀಳದೇ ಇದ್ದಲ್ಲಿ ಅವರಿಗೆ ಈ ವರ್ಷಾಂತ್ಯದವರೆಗೆ ಅಮೆರಿಕ ದೇಶಕ್ಕೆ ತೆರಳಲು ಅವಕಾಶವಿಲ್ಲ. ಇದರಿಂದ ಹಲವರ ಪತ್ನಿಯರು ಭಾರತದಲ್ಲೇ ಉಳಿದುಕೊಳ್ಳಬೇಕಾದ ಸಂಕಷ್ಟ ಸೃಷ್ಟಿಯಾಗಿದೆ.

ಶಿವಾನಿ* ತಮ್ಮ ಇಂಜಿನಿಯರ್‌ ಪತಿ ಜೊತೆ ಅಮೆರಿಕಾದ ನಗರವೊಂದರ ಹೊರ ಭಾಗದಲ್ಲಿ ಕಳೆದ 7 ವರ್ಷಗಳಿಂದ ವಾಸಿಸುತ್ತಿದ್ದರು. ಇತ್ತೀಚೆಗೆ ಅವರ ಎಚ್-‌4 ಡಿಪೆಂಡೆಂಟ್‌ ವೀಸಾದ ಅವಧಿಯನ್ನು ವಿಸ್ತರಿಸಲಾಗಿತ್ತು. ಅಮೆರಿಕಾದಿಂದ ಹೊರ ಹೋದರೆ ವಾಪಸ್‌ ಬರುವುದಕ್ಕೆ ಮೊದಲು ಈ ವೀಸಾಕ್ಕೆ ಸ್ಥಳೀಯ ಅಮೆರಿಕ ರಾಯಭಾರ ಕಚೇರಿ ಸೀಲ್‌ ಹಾಕಬೇಕು.

ಕೆಲಸದ ನಿಮಿತ್ತ ಅವರು ಕೆಲ ಸಮಯದ ಹಿಂದೆ ಭಾರತಕ್ಕೆ ಬಂದಿದ್ದರು. ಆದರೆ ಹಾಗೆ ಬಂದ ತಕ್ಷಣ ಕೊರೊನಾದ ಕರಿಛಾಯೆ ಆರಂಭವಾಯಿತು. ಅಮೆರಿಕಾದ ರಾಯಭಾರ ಕಚೇರಿಗಳು ತಾತ್ಕಾಲಿಕವಾಗಿ ಮುಚ್ಚಿದವು. ಪರಿಣಾಮ ಅವರ ಪಾಸ್‌ಪೋರ್ಟ್‌ಗೆ ಸೀಲ್‌ ಬೀಳಲಿಲ್ಲ.

ಇದೀಗ ಸೋಮವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೆಲವೊಂದು ವಲಸೆ ರಹಿತ ವೀಸಾಗಳನ್ನು ಡಿಸೆಂಬರ್‌ 31ರ ವರೆಗೆ ರದ್ದು ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ಶಿವಾನಿಗೆ ಈಗ ಸಂಕಷ್ಟ ಆರಂಭವಾಗಿದೆ.

ಜೂನ್‌ 24ಕ್ಕೆ ಮೊದಲ ಪಾಸ್‌ಪೋರ್ಟ್‌ ಮೇಲೆ ಸ್ಟ್ಯಾಂಪ್‌ ಬೀಳದೇ ಇದ್ದಲ್ಲಿ ಅವರಿಗೆ ಈ ವರ್ಷಾಂತ್ಯದವರೆಗೆ ಅಮೆರಿಕ ದೇಶಕ್ಕೆ ತೆರಳಲು ಅವಕಾಶವಿಲ್ಲ. ಇದು ಶಿವಾನಿ ಒಬ್ಬರ ಕಥೆಯಲ್ಲ. ಇದೇ ರೀತಿಯ ಪರಿಸ್ಥಿತಿಯನ್ನು ನೂರಾರು, ಸಾವಿರಾರು ಜನರು ಎದುರಿಸುತ್ತಿದ್ದಾರೆ.

ಇದೇ ರೀತಿ ರಾಧಿಕಾ* ತನ್ನ ನಾಲ್ಕು ವರ್ಷದ ಮಗುವಿನೊಂದಿಗೆ ಕುಟುಂಬಸ್ಥರನ್ನು ನೋಡಲು ಈ ವರ್ಷದ ಆರಂಭದಲ್ಲಿ ಕೊಲ್ಕತ್ತಾಗೆ ಬಂದಿದ್ದರು. ಅವರೂ ಈಗ ಭಾರತದಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಎಚ್- 4 ವೀಸಾ ಹೊಂದಿರುವ ಇವರೆಲ್ಲಾ ಉದ್ಯೋಗ ದೃಢೀಕರಣ ದಾಖಲೆಗೆ ಅರ್ಜಿ ಸಲ್ಲಿಸಬಹುದು. ಆದರೆ ಕೊರೊನಾ ಬಾಧೆಯಿಂದ ಈಗ ಈ ಅರ್ಜಿಯ ಪರಿಶೀಲನೆ ನಡೆಯುವ ಸಾಧ್ಯತೆ ಇಲ್ಲ.

ಹೀಗಾಗಿ ಅಮೆರಿಕ ಮೂಲದ ಲಾಯರ್‌ಗಳೀಗ ಈ ಪ್ರಕರಣಗಳನ್ನಿಟ್ಟುಕೊಂಡು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಇನ್ನೊಂದೆಡೆ ಈ ನಿರ್ಧಾರದಿಂದ ತೊಂದರೆಗೆ ಒಳಗಾದವರೆಲ್ಲಾ, ಅಮೆರಿಕಾ ತನ್ನ ನಿರ್ಧಾರವನ್ನು ಬದಲಿಸುತ್ತದೆ ಮತ್ತು ದೇಶಕ್ಕೆ ವಾಪಸ್‌ ಆಗಲು ಅವಕಾಶ ಕಲ್ಪಿಸುತ್ತದೆ ಎಂದು ನಂಬಿಕೊಂಡು ಕಾದುಕುಳಿತಿದ್ದಾರೆ.
(* ಹೆಸರು ಬದಲಿಸಲಾಗಿದೆ)

Comments are closed.