ರಾಷ್ಟ್ರೀಯ

ಉತ್ತರ ಪ್ರದೇಶದ ಮಕ್ಕಳ ನಿರಾಶ್ರಿತರ ಕೇಂದ್ರದಲ್ಲಿ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು

Pinterest LinkedIn Tumblr


ಲಕ್ನೋ (ಜೂ. 22): ಸರ್ಕಾರದಿಂದ ನಡೆಸಲ್ಪಡುವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಕ್ಕಳ ನಿರಾಶ್ರಿತರ ಕೇಂದ್ರ (ಶೆಲ್ಟರ್ ಹೋಂ)ನಲ್ಲಿದ್ದ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು ತಗುಲಿದೆ. ಆ 57 ಅಪ್ರಾಪ್ತರಲ್ಲಿ ಐವರು ಗರ್ಭಿಣಿಯಾಗಿದ್ದಾರೆ. ಕೊರೋನಾ ಸೋಂಕಿತರಲ್ಲದ ಇನ್ನಿಬ್ಬರು ಯುವತಿಯರು ಕೂಡ ಗರ್ಭಿಣಿಯಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಸರ್ಕಾರಿ ಶೆಲ್ಟರ್​ ಹೋಂನಲ್ಲಿರುವ ಈ ಅಪ್ರಾಪ್ತ ಯುವತಿಯರಿಗೆ ಯಾರಿಂದ ಸಾಮೂಹಿಕವಾಗಿ ಕೊರೋನಾ ಸೋಂಕು ತಗುಲಿದೆ? ಅವರು ಗರ್ಭಿಣಿಯಾಗಲು ಯಾರು ಕಾರಣ? ಹಾಗಿದ್ದರೆ ಶೆಲ್ಟರ್​ ಹೋಂಗಳಲ್ಲಿ ಮಹಿಳೆಯರಿಗೆ ಯಾವ ಮಟ್ಟಿಗಿನ ಭದ್ರತೆ ನೀಡಲಾಗುತ್ತಿದೆ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಈ ಘಟನೆಯಿಂದ ಉದ್ಭವವಾಗಿವೆ.

ಕಾನ್ಪುರದ ಶೆಲ್ಟರ್​ ಹೋಂನಲ್ಲಿರುವ ಇಬ್ಬರು ಅಪ್ರಾಪ್ತೆಯರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾದ ನಂತರ ಇಡೀ ಶೆಲ್ಟರ್​ ಹೋಂನಲ್ಲಿರುವ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಲ್ಲಿರುವ ಐವರು ಸೋಂಕಿತೆಯರು ಸೇರಿದಂತೆ 7 ಅಪ್ರಾಪ್ತ ಯುವತಿಯರು ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ.

ಕಾನ್ಪುರ ಜಿಲ್ಲೆಯ ಸ್ವರೂಪ್ ನಗರದಲ್ಲಿರುವ ಶೆಲ್ಟರ್ ಹೋಂನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ನಾನಾ ಜಿಲ್ಲೆಗಳಿಂದ ನಿರಾಶ್ರಿತ ಬಾಲಕಿಯರು ಈ ಶೆಲ್ಟರ್​ ಹೋಂನಲ್ಲಿ ಆಶ್ರಯ ಪಡೆದಿದ್ದಾರೆ. ಅವರಲ್ಲಿ ಐವರು ಬಾಲಕಿಯರು ಶೆಲ್ಟರ್​ ಹೊಂಗೆ ಬರುವ ಮೊದಲೇ ಗರ್ಭಿಣಿಯಾಗಿದ್ದರು. ಮಕ್ಕಳ ರಕ್ಷಣಾ ಸಮಿತಿಯ ಶಿಫಾರಸಿನ ಮೇರೆಗೆ ಅವರನ್ನು ಇಲ್ಲಿ ಸೇರಿಸಿಕೊಳ್ಳಲಾಯಿತು ಎಂದು ಆಡಳಿತ ಮಂಡಳಿ ತಿಳಿಸಿದೆ.

ಶೆಲ್ಟರ್​ ಹೋಂನಲ್ಲಿರುವ 57 ಬಾಲಕಿಯರಿಗೆ ಸೋಂಕು ತಗುಲಿರೋದು ದೃಢ ಪಡುತ್ತಿದ್ದಂತೆ ಎಲ್ಲರನ್ನು ಕೊರೋನಾ ಚಿಕಿತ್ಸೆಗಾಗಿ ರಾಮ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಐವರು ಅಪ್ರಾಪ್ತೆಯರು ಗರ್ಭಿಣಿ ಆಗಿರುವುದು ತಿಳಿದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸೋಂಕಿಗೆ ಒಳಗಾಗಿರುವ ಬಾಲಕಿಯರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಎಲ್ಲ ಬಾಲಕಿಯರು ವಾಸವಾಗಿದ್ದ ಕಟ್ಟಡವನ್ನು ಸೀಲ್‍ಡೌನ್ ಮಾಡಲಾಗಿದೆ.

Comments are closed.