ರಾಷ್ಟ್ರೀಯ

ಉಷ್ಣಾಂಶ ಹೆಚ್ಚಿದ್ದಲ್ಲಿ ಕೊರೊನಾ ಜೀವಿತಾವಧಿ ಕಡಿಮೆ: ಅಧ್ಯಯನ

Pinterest LinkedIn Tumblr


ಹೊಸದಿಲ್ಲಿ: ಉಷ್ಣತೆ ಹೆಚ್ಚಿರುವ ಹಾಗೂ ಆದ್ರತೆ ಅಧಿಕವಾಗಿರುವ ವಾತಾವರಣದಲ್ಲಿ ಕೊರೊನಾ ವೈರಸ್‌ನ ಬಾಳಿಕೆ ಕಡಿಮೆ ಎಂದು ಅಮೆರಿಕದ ಸಂಶೋಧಕರ ತಂಡವೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೊರೊನೋತ್ತರ ಕಾಲದಲ್ಲಿ ಸೋಂಕು ಹರಡುವಿಕೆಯ ಪ್ರಮಾಣವನ್ನು ಇದು ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಮಾರ್ಷಲ್‌ ಯೂನಿವರ್ಸಿಟಿಯ ಸಂಶೋಧಕರ ತಂಡ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ”ಬಿಸಿ ವಾತಾವರಣವಿರುವ ಪ್ರದೇಶದಲ್ಲಿ ಕಡೆ ಮನುಷ್ಯನ ಮೂಗಿನ ಹೊಳ್ಳೆ ಹಾಗೂ ಕಫದಲ್ಲಿ ಕೊರೊನಾ ವೈರಸ್‌ನ ಜೀವಿತಾವಧಿ ಕಡಿಮೆ. ಕಡಿಮೆ ಉಷ್ಣಾಂಶ ಉಳ್ಳ ಪ್ರದೇಶದಲ್ಲಿ ಕೊರೊನಾ ವೈರಸ್‌ ಹೆಚ್ಚು ಕಾಲ ಬದುಕಿ ಉಳಿಯುತ್ತದೆ. ಮೂರು ಮಾದರಿಯ ವಾತಾವರಣದಲ್ಲಿ ಏಳು ದಿನಗಳ ಕಾಲ ಪರೀಕ್ಷೆ ನಡೆಸಲಾಗಿದೆ,” ಎಂದು ಸಂಶೋಧಕರು ತಿಳಿಸಿದ್ದಾರೆ.

ಹೆಚ್ಚು ತಾಪಮಾನ ಇರುವ ಕಡೆಯ ಯಾವುದೇ ವಸ್ತುವಿನ ಮೇಲ್ಮೈನಲ್ಲಿ ಕೋವಿಡ್‌- 19 ವೈರಸ್‌ ಜಾಸ್ತಿ ಕಾಲ ಬಾಳುವುದಿಲ್ಲ. ಜತೆಗೆ ಹರಡುವ ಪ್ರಮಾಣವೂ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ. ಹೈಡ್ರೋಜನ್‌ ಪೆರಾಕ್ಸೈಡ್‌ ಹಾಗೂ ಅತಿನೇರಳೆ ಕಿರಣದ ಮೂಲಕ ವಸ್ತುವಿನ ಮೇಲ್ಮೈನಲ್ಲಿ ಹರಡಿರುವ ವೈರಸ್‌ ತೊಲಗಿಸಲು ಸಾಧ್ಯ ಎಂದು ಮತ್ತೊಂದು ಅಧ್ಯಯನ ಹೇಳಿದೆ.

ರೆಮ್‌ಡಿಸಿವರ್‌ಗೆ ಅನುಮತಿ: ಆ್ಯಂಟಿವೈರಲ್‌ ರೆಮ್‌ಡೆಸಿವಿರ್‌ ಚುಚ್ಚುಮದ್ದು ಲಸಿಕೆ ತಯಾರಿಸಲು ಹೈದರಾಬಾದ್‌ನ ಹೆಟೆರೊ ಸಂಸ್ಥೆಗೆ ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ ಅನುಮತಿ ನೀಡಿದೆ. ”ಇದು ಅಮೆರಿಕದ ಗಿಲೀಡ್‌ ಸೈನ್ಸಸ್‌ ಕಂಡುಹಿಡಿದಿರುವ ರೆಮ್‌ಡೆಸಿವಿರ್‌ನ ಜೆನೆರಿಕ್‌ ರೂಪವಾಗಿದೆ. ಭಾರತದಲ್ಲಿ ಕೋವಿಫಾರ್‌ ಹೆಸರಿನಲ್ಲಿ ಬಿಡುಗಡೆ ಮಾಡಲಾಗುವುದು. 100 ಮಿಲೀ ಚುಚ್ಚುಮದ್ದು ಲಸಿಕೆಗೆ ಬೆಲೆ 5,000-6,000 ರೂ. ಇರಲಿದೆ,” ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

Comments are closed.