ರಾಷ್ಟ್ರೀಯ

ಚಲಿಸುವ ಬಸ್‌ನಲ್ಲಿಯೇ ಸಹ ಪ್ರಯಾಣಿಕರ ಎದುರೇ ಮಹಿಳೆ ಮೇಲೆ ಅತ್ಯಾಚಾರ

Pinterest LinkedIn Tumblr


ನೋಯ್ಡಾ (ಉತ್ತರ ಪ್ರದೇಶ): ಚಲಿಸುತ್ತಿರುವ ಬಸ್‌ನಲ್ಲಿ 25 ವರ್ಷದ ಮಹಿಳೆಯೊಬ್ಬರ ಮೇಲೆ ಬಸ್‌ ಚಾಲಕ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಪ್ರತಾಪ್‌ಘರ್‌ನಿಂದ ನೋಯ್ಡಾಗೆ ತನ್ನ ಎರಡು ಮಕ್ಕಳ ಜೊತೆ ಬರುತ್ತಿರುವಾಗ ಅತ್ಯಾಚಾರ ನಡೆದಿದೆ.

ಪ್ರಮುಖ ಆರೋಪಿ ಬಸ್‌ ಚಾಲಕ ಪರಾರಿಯಾಗಿದ್ದು, ಮತ್ತೊಬ್ಬ ಚಾಲಕನನ್ನು ಮಹಿಳೆಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಘಟನೆ ಲಖನೌ ಮತ್ತು ಮಥುರಾ ನಡುವೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ತನ್ನ ಎರಡು ಮಕ್ಕಳೊಂದಿಗೆ ಖಾಸಗಿ ಬಸ್‌ನಲ್ಲಿ ದೂರ ಪ್ರಯಾಣ ಮಾಡುತ್ತಿದ್ದಳು. ಮಹಿಳೆ ಜೊತೆಗೆ ಬಸ್‌ನಲ್ಲಿ ಇತರೆ 10 ಜನ ಕೂಡ ಇದ್ದರು ಎಂದು ಪೊಲೀಸರು ಹೇಳಿದ್ದಾರೆ. ನೋಯ್ಡಾಗೆ ಬಂದ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ 376 ಮತ್ತು 506ರ ಅಡಿ ಸೆಕ್ಟರ್‌ 20 ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಇಬ್ಬರು ಚಾಲಕರು ಹಾಗೂ ಒಬ್ಬ ಸಹಾಯಕ ಸಿಬ್ಬಂದಿಯನ್ನು ಹೊಂದಿತ್ತು. ಪ್ರತಾಪ್‌ಘರ್‌ನಿಂದ ನೋಯ್ಡಾಗೆ ಇದೇ ಮೊದಲ ಬಾರಿಗೆ ಮಹಿಳೆ ಬಂದಿದ್ದರು. ಮಹಿಳೆಯ ಪತಿ ತರಕಾರಿ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ದೂರು ನೀಡಿದ ತಕ್ಷಣ ಎಫ್‌ಐಆರ್‌ ದಾಖಲಿಸಲಾಗಿದೆ. ಈಗಾಗಲೇ ಒಬ್ಬ ಚಾಲಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ. ಜೊತೆಗೆ ಶೀಘ್ರದಲ್ಲಿಯೇ ಬಸ್‌ ಮಾಲೀಕನನ್ನು ಕೂಡ ವಶಕ್ಕೆ ಪಡೆಯುತ್ತೇವೆ ಎಂದು ಮಹಿಳಾ ಸುರಕ್ಷತೆಯ ಡಿಎಸ್‌ಪಿ ವೃಂದಾ ಶುಕ್ಲಾ ಹೇಳಿದ್ದಾರೆ.

Comments are closed.