ನವದೆಹಲಿ (ಜೂ.17): ಚೀನಾ-ಭಾರತ ಗಡಿಯಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಚೀನಾ ಸೇನೆ ಹಾಗೂ ಭಾರತೀಯ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ ಬರೋಬ್ಬರಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಈ ಬಗ್ಗೆ ಬರೆದಿರುವ ಅಮೆರಿಕ ಮಾಧ್ಯಮಗಳು 4 ದಶಕಗಳ ಚೀನಾ-ಭಾರತ ಗಡಿ ವಿವಾದದಲ್ಲಿ ಇದು ಅತ್ಯಂತ ಭಯಾನಕ ದಿನ ಎಂದು ಬಣ್ಣಿಸಿವೆ.
“ಎರಡೂ ರಾಷ್ಟ್ರಗಳು ಈ ಭಾಗದಲ್ಲಿ ಇನ್ನೂ ಹೆಚ್ಚಿನ ಸಂಘರ್ಷ ನಡೆಯುವುದನ್ನು ಇಷ್ಟಪಡುತ್ತಿಲ್ಲ. ಅದರಲ್ಲೂ ಭಾರತ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದೆ. ಏಕೆಂದರೆ, ಚೀನಾ ಸೇನೆಗೆ ಸರಿಯಾಗಿ ನಿಲ್ಲುವ ತಾಕತ್ತು ಭಾರತ ಬಳಿ ಇಲ್ಲ,” ಎಂದು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.
ಭಾರತದ ಮಿಲಿಟರಿ ಅಧಿಕಾರಿಗಳು ಹೇಳವು ಪ್ರಕಾರ 12ಕ್ಕೂ ಹೆಚ್ಚು ಭಾರತೀಯ ಸೈನಿಕರು ಕಾಣೆಯಾಗಿದ್ದಾರೆ. ಇವರನ್ನು ಚೀನಾ ಸೇನೆ ಬಂಧಿಸಿರಬಹುದು ಎನ್ನುವ ಅನುಮಾನವನ್ನು ಭಾರತ ವ್ಯಕ್ತಪಡಿಸಿದೆ ಎಂದಯ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಭಾರತ ಈ ಸಮಯದಲ್ಲಿ ಚೀನಾ ಜೊತೆ ಯುದ್ಧ ಮಾಡಲು ಬಯಸುತ್ತಿಲ್ಲ. ಏಕೆಂದರೆ, ಕೊರೋನಾ ವೈರಸ್ನಿಂದಾಗಿ ಭಾರತದ ಆರ್ಥಿಕತೆ ಕುಸಿದಿದೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸಮಯದಲ್ಲಿ ಚೀನಾ ಜೊತೆ ಯುದ್ಧ ಸರಿಯಲ್ಲಿ ಎನ್ನುವ ನಿರ್ಧಾರಕ್ಕೆ ಬಂದಿದೆ ಎಂದು ಅಮೆರಿಕ ಮಾಧ್ಯಮಗಳು ಹೇಳಿವೆ.
ಚೀನಾದ ಭಯಕ್ಕೆ ಭಾರತ ಅಮೆರಿಕಕ್ಕೆ ಹತ್ತಿರ:ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಚೀನಾ ತನ್ನ ಹುಚ್ಚಾಟವನ್ನು ಮತ್ತೂ ಹೆಚ್ಚು ಮಾಡಿತ್ತು. ಇದೇ ಕಾರಣಕ್ಕೆ ಅಮೆರಿಕಕ್ಕೆ ಭಾರತ ಹತ್ತಿರವಾಗಿದೆ ಎಂದು ಅಲ್ಲಿನ ದಿ ವಾಷಿಂಗ್ಟನ್ ಪೋಸ್ಟ್ ಬರೆದಿದೆ. “ಚೀನಾ ಹಾಗೂ ಭಾರತದ ಸಂಬಂಧ ಸರಿಯಾಗಿಲ್ಲ. ಹೀಗಾಗಿ ಅಮೆರಿಕಕ್ಕೆ ಭಾರತ ಹತ್ತಿರವಾಗುವ ಪ್ರಯತ್ನ ಮಾಡುತ್ತಿದೆ,” ಎಂಬುದು ದಿ ವಾಷಿಂಗ್ಟನ್ ಡಿಸಿ ಪತ್ರಿಕೆಯ ಅಭಿಪ್ರಾಯ.
Comments are closed.