ರಾಷ್ಟ್ರೀಯ

ಚೀನಾ-ಭಾರತ ಗಡಿ ಸಂಘರ್ಷ; ಜೂನ್ 19 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ಮೋದಿ

Pinterest LinkedIn Tumblr

ನವದೆಹಲಿ: ಚೀನಾ-ಭಾರತ ಗಡಿಯ ಗಲ್ವಾನ್ ನಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಉಭಯ ದೇಶಗಳ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್ 19 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಈ ಕುರಿತು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ವಿಚಾರ ಸಂಬಂಧ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂ.19ರ ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದೆ.

ಪೂರ್ವ ಲಡಾಖ್’ನ ಗಲ್ವಾನ್ ಗಡಿಯಲ್ಲಿ ಕಳೆದ 5 ವಾರಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಈ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದ್ದು, ಸ್ಥಳದಿಂದ ಹಿಂದೆ ಸರಿಯುವ ಕುರಿತು ಒಮ್ಮತಕ್ಕೆ ಬರಲಾಗಿತ್ತು. ಅದರಂತೆ ಚೀನಾ ಯೋಧರು ಸೋಮವಾರ ರಾತ್ರಿ ಕಾಲ್ತೆಗೆಯಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಭಾರತೀಯ ಯೋಧರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದರು. ಕೂಡಲೇ ಭಾರತೀಯ ಯೋಧರು ಪ್ರತಿದಾಳಿಗೆ ಇಳಿದರು. ಹಲವು ತಾಸುಗಳ ಕಾಲ ಯೋಧರ ನಡುವೆ ಘರ್ಷಣೆ ನಡೆಯಿತು. ಮಧ್ಯರಾತ್ರಿ ಬಳಿಕ ಕಲಹ ನಿಂತಿತ್ತು. ಈ ಘರ್ಷಣೆಯಲ್ಲಿ ಭಾರತದ ಕರ್ನಲ್ ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ.

Comments are closed.