ರಾಷ್ಟ್ರೀಯ

ಮತ್ತೆ ಲಾಕ್‌ಡೌನ್‌ಗೆ ಸಿದ್ದತೆ ನಡೆಸಿರುವ ಮೋದಿ?

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಕಿಲ್ಲರ್ ಕೊರೊನಾ ಹಾವಳಿ ಮತ್ತಷ್ಟು ತೀವ್ರವಾಗಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ 3ಲಕ್ಷ ದಾಟಿದೆ. ಅಲ್ಲದೆ ಬರೋಬ್ಬರಿ 9 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದಿನೇದಿನೆ ಹೊಸ ಸೋಂಕು ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಆತಂಕ ಮೂಡಿಸಿದೆ.

ಲಾಕ್‌ಡೌನ್ ಸಡಿಲಿಕೆ ನಂತರ ಸೋಂಕು ಮತ್ತು ಮರಣ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ಸೋಂಕು ನಿಯಂತ್ರಣ ಮಾರ್ಗೋಪಾಯಗಳನ್ನು ಹುಡುಕುತ್ತಿದೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೆಗಾ ವಿಡಿಯೋ ಕಾನ್ಫರೆನ್ಸ್ ನಡೆಸಿರುವುದಾಗಿ ತಿಳಿಸಿದ್ದಾರೆ. ಇದು ದೇಶದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗಲಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ಐದನೇ ಹಂತದಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆಯಾದರೂ,
ಜೂ.16 ಮತ್ತು 17ರಂದು ಪ್ರಧಾನಿ ಎರಡು ಹಂತಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಇದಕ್ಕೂ ಮುನ್ನ ಸೋಮವಾರ(ಜೂ.16)ದಂದು ಮತ್ತೊಂದು ಮಹತ್ವದ ಸಭೆಯನ್ನು ಪ್ರಧಾನಿ ಆಯೋಜಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಲಾಕ್‍ಡೌನ್ ಮತ್ತೆ ಜಾರಿಗೊಳಿಸಬೇಕೆ ಬೇಡವೇ ಎಂಬ ಬಗ್ಗೆ ಚರ್ಚಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮತ್ತೊಂದು ಪ್ರಮುಖ ವಿಚಾರವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಈ ವಿಡಿಯೋ ಕಾನ್ಫರೆನ್ಸ್ ಸಭೆಯು ಬರೋಬ್ಬರಿ ಎರಡು ದಿನಗಳ ಕಾಲ ನಡೆಯಲಿದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಕೊರೋನಾ ಸೋಂಕಿನ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಮೊದಲನೇ ದಿನ ಅಂದರೆ ಜೂನ್ 16ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಿದ್ದಾರೆ.

ಜೂನ್‌ 17ರಂದು ಕೊರೊನಾ ಸೋಂಕು ಹೆಚ್ಚಿರುವ ದೇಶದ 15 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಅನ್‌ಲಾಕ್‌ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದದ ವೇಳೆ ಪ್ರಧಾನಿ ವಾಸ್ತವ ಪರಿಸ್ಥಿತಿ, ಆಸ್ಪತ್ರೆಗಳಲ್ಲಿ ಲಭಿಸುತ್ತಿರುವ ಚಿಕಿತ್ಸೆ, ವೈದ್ಯಕೀಯ ಸಿಬ್ಬಂದಿಯ ಸಂಖ್ಯೆ, ಮತ್ತು ಇತರ ಸ್ಥಳಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ 6ನೇ ಬಾರಿ ಲಾಕ್‍ಡೌನ್ ವಿಸ್ತರಿಸುವ ಸಾಧ್ಯತೆ ಬಗ್ಗೆಯೂ ಗಹನ ಚರ್ಚೆ ನಡೆಸಲಿದ್ದಾರೆ.

ಕಳೆದವಾರವಷ್ಟೇ ದೇಶ ಸಹಜಸ್ಥಿತಿಯತ್ತ ಮರಳಿರುವಾಗಲೇ ಕೊರೊನಾ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಈಗಷ್ಟೇ ಆರ್ಥಿಕ ಚಟುವಟಿಕೆ ಕುದುರುತ್ತಿರುವ ಸಂದರ್ಭದಲ್ಲೇ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ.

ಈ ಸನ್ನಿವೇಶದಲ್ಲಿ ಲಾಕ್‍ಡೌನ್‍ನ್ನು ವಿಸ್ತರಿಸುವ ಅಥವಾ ಮುಂದುವರೆಸದೆ ಇರುವ ಜಿಜ್ಞಾಸೆಯಲ್ಲಿರುವ ಸರ್ಕಾರಗಳು ಒಂದು ರೀತಿಯ ಅಡ್ಡ ಕತ್ತರಿಯಲ್ಲಿ ಸಿಲುಕಿವೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ ನಂತರ ಜೂ.18ರಂದು ಕೊರೊನಾ ಹಾವಳಿ ನಿಯಂತ್ರಣಕ್ಕಾಗಿ ಹೊಸ ಮಾರ್ಗೋಪಾಯಗಳ ಬಗ್ಗೆ ಕೇಂದ್ರ ಸರಕಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಕೊರೊನಾ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನ ಅತ್ಯಂತ ಪ್ರಮುಖವಾಗಿದೆ.

Comments are closed.