ರಾಷ್ಟ್ರೀಯ

10 ದಿನಗಳಲ್ಲಿ ದೇಶದಲ್ಲಿ 1 ಲಕ್ಷ ಹೆಚ್ಚಿದ ಕೊರೊನಾ ಸೋಂಕು

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕ ಹಾವಳಿಯಿಂದ ತತ್ತರಿಸಿರುವ ವಿಶ್ವದ ಅಗ್ರ ಐದು ರಾಷ್ಟ್ರಗಳ ಪೈಕಿ 4ನೇ ಸ್ಥಾನ ತಲುಪಿರುವ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷ ದಿಂದ 3 ಲಕ್ಷ ದ ಗಡಿ ಮುಟ್ಟಲು ಕೇವಲ 10 ದಿನಗಳನ್ನು ತೆಗೆದುಕೊಂಡಿದೆ ಎನ್ನುವುದು ಆತಂಕಕಾರಿ ಅಂಶವಾಗಿದೆ.

ಅಲ್ಲದೆ ಶನಿವಾರದಂದು 11,458 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ವೈರಾಣುವಿಗೆ ಬಲಿಯಾದವರ ಸಂಖ್ಯೆ ಕೂಡ 386 ಆಗುವ ಮೂಲಕ ಹೊಸ ಏಕದಿನ ದಾಖಲೆ ವರದಿಯಾಗಿದೆ.

ಕೊರೊನಾ ದೇಶವನ್ನ ಪ್ರವೇಶಿಸಿದ್ದ ದಿನಗಳಲ್ಲಿ 100 ಮಂದಿ ಸೋಂಕಿತರಿಂದ 1 ಲಕ್ಷದ ಗಡಿ ಮುಟ್ಟಲು ಬರೋಬ್ಬರಿ 64 ದಿನಗಳು ಬೇಕಾಗಿದ್ದವು ಎಂಬುದು ಗಮನಾರ್ಹ. ಈ ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ದೇಶದಲ್ಲಿಕೊರೊನಾ ಪ್ರಸರಣ ವೇಗ ಹೆಚ್ಚುತ್ತಿರುವುದು ಖಾತ್ರಿಯಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

9 ಸಾವಿರದತ್ತ ಮೃತರ ಸಂಖ್ಯೆ

ಸದ್ಯ ದೇಶಾದ್ಯಂತ ಕೊರೊನಾಗೆ ಬಲಿಯಾಗಿರುವವರ ಸಂಖ್ಯೆ 8,928 ಇದ್ದು, ಶೀಘ್ರವೇ 9 ಸಾವಿರ ಮುಟ್ಟುವ ಆತಂಕವನ್ನು ಸರಕಾರ ಮತ್ತು ಹಿರಿಯ ವಿಜ್ಞಾನಿಗಳು ಕೂಡ ವ್ಯಕ್ತಪಡಿಸಿದ್ದಾರೆ. ಕಳೆದ 134 ದಿನಗಳಿಂದ ದೇಶದಲ್ಲಿ ಕೊರೊನಾ ಬಾಧಿಸುತ್ತಿದ್ದು ಎರಡು ದಿನಗಳ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಸದ್ಯ ಕೊರೊನಾ ಸೋಂಕಿತರ ಪ್ರಕರಣಗಳು ಪ್ರತಿ 17.4 ದಿನಗಳ ಸರಾಸರಿಗೆ ದೇಶದಲ್ಲಿ ದ್ವಿಗುಣಗೊಳ್ಳುತ್ತಿವೆ. ಈ ಮುಂಚೆ 15.4 ದಿನಗಳಿಗೆ ಪ್ರಕರಣಗಳು ದುಪ್ಪಟ್ಟಾಗುತ್ತಿತ್ತು.

ದಿಲ್ಲಿಯಲ್ಲಿ ಹೆಚ್ಚು ಸಾವು

ಶನಿವಾರ ಬೆಳಗ್ಗೆವರೆಗೆ ಕೊರೊನಾಗೆ ಮೃತರಾದವರ ಪೈಕಿ ಅತಿ ಹೆಚ್ಚು ಸಂಖ್ಯೆ ದಿಲ್ಲಿಯಲ್ಲಿ ವರದಿಯಾಗಿದೆ. 129 ಮಂದಿ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, 127 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 1 ಲಕ್ಷ ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಒಟ್ಟು 3,717 ಮಂದಿ ಕೊರೊನಾಗೆ ಇಲ್ಲಿ ಬಲಿಯಾಗಿದ್ದಾರೆ.
ತಮಿಳುನಾಡು 2ನೇ ಸ್ಥಾನದಲ್ಲಿದ್ದು, 42,687 ಮಂದಿಗೆ ಕೊರೊನಾ ತಗುಲಿದೆ. ರಾಜ್ಯದಲ್ಲಿ ಒಟ್ಟು 397 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ದಿಲ್ಲಿಯಲ್ಲಿ 36,824 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1,214 ಮಂದಿ ಮೃತಪಟ್ಟಿದ್ದಾರೆ. ಆದರೆ ಸಾವಿಗೀಡಾದವರ ಸಂಖ್ಯೆಯಲ್ಲಿ ಗುಜರಾತ್‌ ಎರಡನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ 1,449 ಕೋವಿಡ್‌ ಸೋಂಕಿತರು ನಿಧನರಾಗಿದ್ದಾರೆ.

ಚೇತರಿಕೆ ಹೆಚ್ಚಿರುವುದೇ ಸಮಾಧಾನ

ದೇಶದಲ್ಲಿ3 ಲಕ್ಷ ದಾಟಿರುವ ಸೋಂಕಿತರ ಸಂಖ್ಯೆಯ ಪೈಕಿ ಈಗಾಗಲೇ 1.56 ಲಕ್ಷ ಮಂದಿ ಚೇತರಿಸಿಕೊಂಡಿರುವುದು ಸಮಾಧಾನಕರ ಸಂಗತಿಯಾಗಿದೆ. ಅದೇ ರೀತಿ 1,46,880 ಮಂದಿ ಸದ್ಯ ಕೊರೊನಾದಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 1 ಲಕ್ಷ ಮಂದಿಗೆ ಸೋಂಕು ತಾಕಿದ್ದು ದಾಖಲೆಯಾದರೂ ಆ ಪೈಕಿ 47,796 ಮಂದಿ ಈಗಾಗಲೇ ಚೇತರಿಕೆ ಕಂಡಿರುವುದು ಗಮನಾರ್ಹ ಅಂಶವಾಗಿದೆ.

Comments are closed.