ನವದೆಹಲಿ: ಜಗತ್ತಿನಾದ್ಯಂತ ಆತಂಕದ ಅಲೆ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗಿರುವ ದೇಶಗಳ ಪೈಕಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 308, 993 ಆಗಿದ್ದು, ಅಮೆರಿಕಾ, ಬ್ರೆಜಿಲ್ ಮತ್ತು ರಷ್ಯಾ ದೇಶಕ್ಕಿಂತ ಹಿಂದಿದೆ.
ದೇಶದಲ್ಲಿನ ಒಟ್ಟು ಕೋವಿಡ್ -19 ಪ್ರಕರಣಗಳ ಪೈಕಿ ಶೇ. 32 ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 1 ಲಕ್ಷ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಶೇ. 45 ರಷ್ಟು ಕೋವಿಡ್- ಪ್ರಕರಣಗಳು ಮುಂಬೈ ಹಾಗೂ ತಮಿಳುನಾಡು ರಾಜ್ಯಗಳಿಂದಲೇ ವರದಿಯಾಗಿದೆ.
ಅತಿ ಹೆಚ್ಚು ಕೊರೋನಾ ಭಾದಿತ ನಗರಗಳ ಪೈಕಿಯಲ್ಲಿ ಮುಂಬೈ, ಪುಣೆ, ಠಾಣೆ , ದೆಹಲಿ, ಗುಜರಾತಿನ ಅಹಮಾದಾಬಾದ್, ತಮಿಳುನಾಡಿನ ಚೆನ್ನೈ, ರಾಜಸ್ಥಾನದ ಜೈಪುರ ಉನ್ನತ ಸ್ಥಾನದಲ್ಲಿವೆ. ದೇಶದಲ್ಲಿನ ಒಟ್ಟು ಕೋವಿಡ್- 19 ಪ್ರಕರಣಗಳ ಅರ್ಧದಷ್ಟು ಪ್ರಕರಣಗಳು ಮುಂಬೈ, ದೆಹಲಿ, ಅಹಮದಾಬಾದ್, ಚೆನ್ನೈ ಮತ್ತು ಥಾಣೆಗಳಿಂದಲೇ ಬಂದಿದೆ.
ದೇಶದಲ್ಲಿ ಕೊರೋನಾದಿಂದ ಅತಿ ಹೆಚ್ಚು ಹದಗೆಟ್ಟಿರುವ ನಗರಗಳಲ್ಲಿ ವಾಣಿಜ್ಯ ನಗರಿ ಮುಂಬೈ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 55, 451 ಪ್ರಕರಣ ದಾಖಲಾಗಿದ್ದು, ಸುಮಾರು 2 ಸಾವಿರ ಜನರು ಮೃತಪಟ್ಟಿದ್ದಾರೆ. ಸ್ವೀಡನ್, ನೆದರ್ ಲ್ಯಾಂಡ್, ಈಜಿಪ್ಟ್, ಯುಎಇ ಮುಂತಾದ ದೇಶಗಳಲ್ಲಿ ವರದಿಯಾದ ಒಟ್ಟು ಪ್ರಕರಣಗಳಿಗಿಂತ ಮುಂಬೈನಲ್ಲಿಯೇ ಹೆಚ್ಚಿನ ಸೋಂಕಿನ ಪ್ರಕರಣ ಕಂಡುಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಲ್ಲಿಯವರೆಗೂ ಕೊರೋನಾದಿಂದ 1, 214 ಮಂದಿ ಮೃತಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 36, 824ಕ್ಕೆ ಏರಿಕೆ ಆಗಿದೆ. 13, 398 ರೋಗಿಗಳು ಗುಣಮುಖರಾಗಿದ್ದಾರೆ.
Comments are closed.