ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಸಮುದಾಯ ಹಂತ ತಲುಪಿದ್ದು, ಕೇಂದ್ರ ಸರ್ಕಾರವೇಕೆ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ಗುರುವಾರ ಪ್ರಶ್ನೆ ಮಾಡಿದೆ.
ಈ ಕುರಿತು ಮಾತನಾಡಿರುವ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರು, ದೆಹಲಿಯಲ್ಲಿ ಕೊರೋನಾ ಸೋಂಕಿನ ಸಂಖ್ಯೆಯನ್ನು ನೋಡಿ, ಪ್ರತೀನಿತ್ಯ ಇಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಈಗಾಗಲೇ ವೈರಸ್ ಸಮುದಾಯ ಹಂತ ತಲುಪಿದೆ. ಆದರೂ ಕೇಂದ್ರ ಸರ್ಕಾರವೇಕೆ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ದೆಹಲಿ ಆರೋಗ್ಯ ಸಚಿವರು ಕೊರೋನಾ ಎಷ್ಟು ವೇಗದಲ್ಲಿ ಹರಡುತ್ತಿದೆ ಎಂಬುದರ ಮಾಹಿತಿ ನೀಡಿದ್ದಾರೆ. ಸೋಂಕು ಯಾವ ರೀತಿ, ಎಲ್ಲಿ, ಹೇಗೆ ಹರಡಿತು ಎಂಬುದರ ಮಾಹಿತಿಯೇ ತಿಳಿಯದಿದ್ದಾಗ ಅದನ್ನು ಸಮುದಾಯ ಹಂತ ಎಂದು ಕರೆಯಲಾಗುತ್ತಿದೆ. ಕೇಂದ್ರ ಸರ್ಕಾರ ಯಾವುದರ ಆಧಾರದ ಮೇಲೆ ಇನ್ನೂ ಚಿಂತನೆ ನಡೆಸುತ್ತಿದೆ? ಯಾವ ಕಾರಣಕ್ಕೆ ಅವರು ಇದನ್ನು ನಂಬುತ್ತಿಲ್ಲ? ಇದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು, ದೆಹಲಿಯಲ್ಲಿ ಕೊರೋನಾ ಸಮುದಾಯ ಹಂತ ತಲುಪಿದೆ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಸಮುದಾಯ ಹಂತ ತಲುಪಿರುವ ಕುರಿತು ನಾವು ಘೋಷಣೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಂಡು, ಘೋಷಣೆ ಮಾಡಬೇಕು ಎಂದು ತಿಳಿಸಿದ್ದರು.
Comments are closed.