ಐಜ್ವಾಲ್: ಏಕಾಏಕಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಮಿಝೋರಾಂ ಸರಕಾರ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹೇರಿದೆ. ಎಲ್ಲಾ ರಾಜ್ಯಗಳು ಲಾಕ್‌ಡೌನ್ ಸಡಿಲಿಕೆ ಮಾಡಿ ಮಾಲ್, ದೇವಸ್ಥಾನ ಮತ್ತು ರೆಸ್ಟೋರೆಂಟ್‌ಗಳನ್ನು ಆರಂಭಿಸುತ್ತಿರುವ ಹೊತ್ತಲ್ಲೇ ಸರಕಾರ ಕಠಿಣ ಲಾಕ್‌ಡೌನ್ ಜಾರಿಗೆ ತರಲು ನಿರ್ಧರಿಸಿದೆ.
ಜೂನ್ 9 ರಿಂದ ಅಂದರೆ ಮಂಗಳವಾರದಿಂದ ಲಾಕ್‌ಡೌನ್ ಆರಂಭವಾಗಲಿದ್ದು, ಎರಡು ವಾರಗಳ ಕಾಲ ಇರಲಿದೆ. ಮುಖ್ಯಮಂತ್ರಿ ಝೊರಾಮ್‌ತಂಗ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ.
ಇದೇ ವೇಳೆ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು 2 ವಾರಗಳಿಂದ 3 ವಾರಗಳಿಗೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಸಲಹಾ ಸಮಿತಿ 14 ದಿನಗಳ ಕ್ವಾರಂಟೈನ್ ಅವಧಿಯನ್ನು 21 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಇಲಾಖೆ ಟ್ಟೀಟ್ ಮಾಡಿದೆ.
ಈಶಾನ್ಯ ಭಾಗದ ಈ ಪುಟ್ಟ ರಾಜ್ಯದಲ್ಲಿ ಇಲ್ಲಿಯವರೆಗೆ 42 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ಒಬ್ಬರು ಚೇತರಿಸಿಕೊಂಡಿದ್ದು, 41 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ಭಾನುವಾರ ಒಂದೇ ದಿನ ರಾಜ್ಯದಲ್ಲಿ 8 ಹೊಸ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದವು. ಇವರೆಲ್ಲರೂ ದಿಲ್ಲಿಯಿಂದ ರಾಜ್ಯಕ್ಕೆ ಮರಳಿದವರಾಗಿದ್ದು, ರಾಜ್ಯಕ್ಕೆ ಬಂದಂದಿನಿಂದ ಕ್ವಾರಂಟೈನ್‌ನಲ್ಲಿ ಇದ್ದರು.
Comments are closed.