ರಾಷ್ಟ್ರೀಯ

ಮತ್ತೆ 60 ಪೈಸೆಗೆ ಏರಿದ ಪೆಟ್ರೋಲ್‌, ಡೀಸೆಲ್ ದರ

Pinterest LinkedIn Tumblr


ಹೊಸದಿಲ್ಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಸೋಮವಾರ ಪ್ರತಿ ಲೀಟರ್‌ಗೆ ಮತ್ತೆ 60 ಪೈಸೆ ಏರಿಕೆಯಾಗಿದೆ. ಭಾನುವಾರವೂ ಈ ಎರಡೂ ತೈಲಗಳ ದರವನ್ನು ತಲಾ 60 ಪೈಸೆ ಏರಿಕೆ ಮಾಡಲಾಗಿತ್ತು.

ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್‌ ದರ 72.46 ರೂ.ಗೆ ವೃದ್ಧಿಸಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ರೂ.74.79, ಡೀಸೆಲ್‌ ದರ ರೂ.67.11ಕ್ಕೆ ಏರಿಕೆಯಾಗಿದೆ. 83 ದಿನಗಳ ಕಾಲ ಏರಿಳಿತ ಕಾಣದೇ ಸ್ಥಿರವಾಗಿದ್ದ ಇಂಧನ ದರ ಭಾನುವಾರದಿಂದ ಏರಿಕೆಯ ಹಾದಿ ಹಿಡಿದಿದೆ.

ಮಾ.16ರಿಂದ ಸ್ಥಗಿತಗೊಂಡಿದ್ದ ದೈನಂದಿನ ದರ ಪರಿಷ್ಕರಣೆಯು ಭಾನುವಾರದಿಂದ ಮತ್ತೆ ಆರಂಭಗೊಂಡಿದೆ. ಕಳೆದ ಎರಡೂ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ತಲಾ ರೂ.1.20 ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುತ್ತಿದ್ದು, ಇದು ದೇಶೀಯ ಇಂಧನಗಳ ಮೇಲೆ ಪ್ರಭಾವ ಬೀರಿದೆ. ಕಳೆದ ಮೂರು ನಾಲ್ಕು ತಿಂಗಳಿಂದ ತೀವ್ರ ಇಳಿಕೆಯಾಗಿದ್ದ ಕಚ್ಚಾ ತೈಲದ ದರ ಈಗ ತುಸು ಏರಿಕೆಯ ಹಾದಿಗೆ ಮರಳಿದೆ.

ಹಿಂದೆ ಕಚ್ಚಾ ತೈಲದ ದರ ಕುಸಿದ ಸಂದರ್ಭದಲ್ಲಿ ಗ್ರಾಹಕರಿಗೆ ಅದರ ಲಾಭವನ್ನು ಸರಕಾರ ವರ್ಗಾಯಿಸಿರಲಿಲ್ಲ. ಬದಲಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಹೆಚ್ಚುವರಿ 3 ರೂಪಾಯಿ ಅಬಕಾರಿ ಸುಂಕವನ್ನು ವಿಧಿಸಿತ್ತು. ಬಳಿಕ, ಮೇ 6ರಂದು ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ಕ್ರಮವಾಗಿ 10 ಮತ್ತು 13 ರೂ. ಏರಿಕೆ ಮಾಡಿತ್ತು. ಈ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ತೀವ್ರ ಇಳಿಕೆಯಾದರೂ, ಅದು ಗ್ರಾಹಕರ ಅನುಭವಕ್ಕೆ ಬಂದಿರಲಿಲ್ಲ. ಆದರೆ ಈಗ ಏರಿಕೆಯಾಗುತ್ತಿದ್ದಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಏರಿಸಲಾಗುತ್ತಿದೆ.

Comments are closed.